

ವಿಶಾಖಪಟ್ಟಣಂ: ಇಲ್ಲೊಬ್ಬ ವಿದ್ಯಾರ್ಥಿನಿ ರೈಲಿನಿಂದ ಇಳಿಯುವಾಗ ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಅನೇಕ ಸಮಯ ಅಲ್ಲೆ ಸಿಲುಕಿ ಒದ್ದಾಡಬೇಕಾಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಶಾಖಪಟ್ಟಣಂ ಜಿಲ್ಲೆಯ ದುವ್ವಾಡ ರೈಲು ನಿಲ್ದಾಣದಲ್ಲಿ ಈ ಘಟನೆಯ ನಡೆದಿದೆ. ಶಶಿಕಲಾ, ದುವ್ವಾಡದ ಕಾಲೇಜೊಂದರಲ್ಲಿ ಎಂಸಿಎ ಓದುತ್ತಿರುವ ವಿದ್ಯಾರ್ಥಿನಿ. ಈಕೆ ನಿಲ್ದಾಣದಲ್ಲಿ ಓಡುತ್ತಿದ್ದ ರೈಲಿನಿಂದ ಕೆಳಗಿಳಿಯುವ ವೇಳೆ ಆಕಸ್ಮಿಕವಾಗಿ ಪ್ಲಾಟ್ಫಾರ್ಮ್ನಿಂದ ಜಾರಿ ರೈಲು ಹಳಿಯ ಕಡೆಗೆ ಬಿದ್ದಿದ್ದಾಳೆ. ಆಗ ಆಕೆ ರೈಲು ಹಾಗೂ ಪ್ರಾಟ್ಫಾರ್ಮ್ ನಡುವೆ ಇರುವ ಸಣ್ಣ ಜಾಗದಲ್ಲಿ ಸಿಲುಕಿದ್ದಾಳೆ. ಈ ಅನಿರೀಕ್ಷಿತ ಘಟನೆಯಿಂದ ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದ ಯುವತಿ ನರಕಯಾತನೆ ಅನುಭವಿಸಬೇಕಾಯ್ತು.
ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ವಿದ್ಯಾರ್ಥಿನಿಯನ್ನ ಕಾಪಾಡಲು ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಈ ವಿಷಯ ರೈಲ್ವೇ ನಿಲ್ದಾಣದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ರೈಲ್ವೆ ರಕ್ಷಣಾ ತಂಡ, ವಿದ್ಯಾರ್ಥಿನಿ ಸಿಲುಕಿದ್ದ ಪ್ಲಾಟ್ಫಾರ್ಮ್ ಅನ್ನೇ ಒಡೆದಿದ್ದಾರೆ. ಈಗ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.