ಮಾರ್ಕ್​ಶೀಟ್​ ಕೊಡೋದು ತಡ ಆಯ್ತು ಅಂತ ಪ್ರಾಂಶುಪಾಲರಿಗೇ ಬೆಂಕಿ ಹಚ್ಚಿದ ವಿದ್ಯಾರ್ಥಿ!

principal on fire
Published on

ಇಂದೋರ್​: ಇಂದೋರ್‌ನ ಬಿಎಂ ಕಾಲೇಜಿನ ಮಾಜಿ ವಿದ್ಯಾರ್ಥಿ, ಸೋಮವಾರ ತನ್ನ ಕಾಲೇಜಿನ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಶುತೋಷ್ ಶ್ರೀವಾಸ್ತವ ಎಂಬ ಮಾಜಿ ವಿದ್ಯಾರ್ಥಿ ತನ್ನ ಅಂಕಪಟ್ಟಿ ಸಿಗಲು ವಿಳಂಬವಾದ ಬಗ್ಗೆ ಅಸಮಾಧಾನಗೊಂಡಿದ್ದು, ಮನೆಗೆ ಹಿಂದಿರುಗುತ್ತಿದ್ದಾಗ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ್ದಾನೆ.

ಕಾಲೇಜು ಪ್ರಾಂಶುಪಾಲರಾದ 54 ವರ್ಷದ ವಿಮುಕ್ತ ಶರ್ಮಾ ಅವರಿಗೆ ಶೇಕಡಾ 90 ರಷ್ಟು ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಇಂದೋರ್ ಪೊಲೀಸ್ ವರಿಷ್ಠಾಧಿಕಾರಿ ಭಗವತ್ ಸಿಂಗ್ ವಿರ್ಡೆ ಹೇಳಿದ್ದಾರೆ. ಈ ಕಿರಾತಕ, ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ್ದೇ ತಡ, ಅವರು ಕಾಲೇಜು ಕಟ್ಟಡದತ್ತ ಓಡಿದ್ದಾರೆ. ಉರಿಯುತ್ತಿರುವ ಪ್ರಾಂಶುಪಾಲರನ್ನು ಕಂಡ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು.

ಆರೋಪಿಯ ಕೈ ಮತ್ತು ಎದೆಗೆ ಸುಟ್ಟ ಗಾಯಗಳಾಗಿದ್ದು ಅವರು ಟಿಂಚಾ ಜಲಪಾತಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ. ಆದರೆ ಈ ವಿದ್ಯಾರ್ಥಿ ಆತ್ಮಹತ್ಯೆ ಮಾಡದಂತೆ ಕಾವಲುಗಾರ ತಡೆದರು.

ಕಾವಲುಗಾರರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅವನು ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದು ತಾನು ಪ್ರಾಂಶುಪಾಲರ ಬಗ್ಗೆ ಅಸಮಾಧಾನ ಹೊಂದಿರುವ ಬಗ್ಗೆ ಹೇಳಿದ್ದಾನೆ.

ವಿಚಾರಣೆಯ ಸಮಯದಲ್ಲಿ, ಅಶುತೋಷ್ ಅವರು ತಮ್ಮ ಏಳನೇ ಮತ್ತು ಎಂಟನೇ ಸೆಮಿಸ್ಟರ್ ಪರೀಕ್ಷೆಗಳನ್ನು ನೀಡಿದ್ದು ಜುಲೈ 2022ರಲ್ಲಿ ಫಲಿತಾಂಶ ಬಂದಿತ್ತು ಎಂದು ಬಹಿರಂಗಪಡಿಸಿದರು. ಆದರೆ, ಹಲವಾರು ಬಾರಿ ವಿನಂತಿಸಿದ ನಂತರವೂ ಕಾಲೇಜು ತನಗೆ ಅಂಕಪಟ್ಟಿ ನೀಡಲಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಈ ಹಿಂದೆಯೂ ಪ್ರಾಂಶುಪಾಲರಿಗೆ ಕಿರುಕುಳ ನೀಡಿದ್ದ!
ಇದರಿಂದ ಸಿಟ್ಟಿಗೆದ್ದ ಆತ, ಪ್ರಾಂಶುಪಾಲರು ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದ. ಈ ಹಿಂದೆಯೂ ಪ್ರಾಂಶುಪಾಲರಿಗೆ ಕಿರುಕುಳ ನೀಡಿದ್ದ. ಈ ಬಗ್ಗೆ ಪ್ರಾಂಶುಪಾಲರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಸಣ್ಣಪುಟ್ಟ ಸಮಸ್ಯೆ ಎಂದು ಪರಿಗಣಿಸಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಈತನ ಇತಿಹಾಸದಲ್ಲಿ ಇದೇ ರೀತಿಯ ಅನೇಕ ವಿಚಾರಗಳು ನಡೆದಿವೆ. ಆತ ಈ ಹಿಂದೆ ಕಾಲೇಜು ಪ್ರಾಧ್ಯಾಪಕರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಇದಕ್ಕಾಗಿ ಅವರನ್ನು ಹಿಂದೆ ಬಂಧಿಸಲಾಗಿತ್ತು. ಸದ್ಯ, ಪ್ರಾಂಶುಪಾಲರ ಮೇಲೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪ್ರಾಂಶುಪಾಲರ ಸ್ಥಿತಿ ಗಂಭೀರವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net