ಫ್ರಾನ್ಸ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾವು; ಶಾಲೆಗಳಿಗೆ ಬೆಂಕಿ ಹಚ್ಚಿ ಪೊಲೀಸರ ಜತೆ ಗಲಾಟೆ! | France Student Protes

ಫ್ರಾನ್ಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಹಲವು ಕಡೆ ಶಾಲೆಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ಘರ್ಷಣೆ ನಡೆದಿದ್ದು, ನೂರಾರು ಶಾಲೆಗಳಲ್ಲಿ ತರಗತಿಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ತವಾಗಿವೆ.
France School Protest
ಫ್ರಾನ್ಸ್‌ನಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ
Published on: 
Summary

ಫ್ರಾನ್ಸ್‌ನಲ್ಲಿ ಜೋರಾದ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಟನೆ

ಹಲವು ಕಡೆ ಬೆಂಕಿ ಹಚ್ಚಿ, ರಸ್ತೆ ಹಾಗೂ ಶಾಲೆಗಳ ಪ್ರವೇಶ ದ್ವಾರ ಬಂದ್

ಪೊಲೀಸರ ಮೇಲೆ ವಸ್ತುಗಳನ್ನು ಎಸೆದ ಹೈಸ್ಕೂಲ್ ವಿದ್ಯಾರ್ಥಿಗಳು

France School Protest: ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಫ್ರಾನ್ಸ್‌ನ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದೆ. ಹಲವು ಕಡೆ ವಿದ್ಯಾರ್ಥಿಗಳು ಬೆಂಕಿ ಹಚ್ಚಿ, ಶಾಲೆಗಳ ಗೇಟ್‌ಗಳಿಗೆ ಬೀಗ ಹಾಕಿ ಪ್ರತಿಭಟಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ.

15ರಿಂದ 18 ವರ್ಷದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಶಾಲಾ ಅವಧಿ ಹೆಚ್ಚು, ಮೂಲಸೌಕರ್ಯ ಕೊರತೆ ಹಾಗೂ ಶಿಕ್ಷಕರ ಗೈರುಹಾಜರಿ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ಶುರುವಾದ ಪ್ರತಿಭಟನೆ ಈಗ ದೇಶಾದ್ಯಂತ ಹರಡಿದ್ದು, ಸುಮಾರು 400 ಶಾಲೆಗಳು ಮುಚ್ಚಿದ್ದರೆ, 564 ಶಾಲೆಗಳ ತರಗತಿಗಳಿಗೆ ಅಡ್ಡಿಯಾಗಿದೆ.

ಟಿಯರ್ ಗ್ಯಾಸ್ ಪ್ರಯೋಗ

ಪಶ್ಚಿಮ ಫ್ರಾನ್ಸ್‌ನ ಬ್ರೆಸ್ಟ್‌ನಲ್ಲಿ ವಿದ್ಯಾರ್ಥಿಗಳು ಪೊಲೀಸರತ್ತ ವಸ್ತುಗಳನ್ನು ಎಸೆದ ಹಿನ್ನೆಲೆಯಲ್ಲಿ ಟಿಯರ್ ಗ್ಯಾಸ್ ಪ್ರಯೋಗಿಸಲಾಗಿದೆ. ಬೆಲ್ಫೋರ್ಟ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿ 17 ವರ್ಷದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಗಾಯಗೊಂಡ ಅಧಿಕಾರಿ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಠಿ ಬೀಸಿದ ಪೊಲೀಸರು

ಇದೇ ವೇಳೆ, ಪ್ರತಿಭಟನೆ ಹತ್ತಿಕ್ಕುವ ವೇಳೆ ಪೊಲೀಸರು ಅತಿಯಾದ ಬಲ ಬಳಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಟೌಲೂಸ್‌ನಲ್ಲಿ ಟಿಯರ್ ಗ್ಯಾಸ್‌ನಿಂದ ಕಣ್ಣಿಗೆ ಉರಿ ಉಂಟಾದ ಪ್ರತಿಭಟನಾಕಾರರು ಪರಸ್ಪರ ಕಣ್ಣಿಗೆ ಹನಿಗಳನ್ನು ಹಾಕಿಕೊಂಡಿದ್ದಾರೆ. ಆಬರ್ವಿಲಿಯರ್ಸ್‌ನಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಹಾಗೂ ಗಲಭೆ ನಿಯಂತ್ರಣ ಗುರಾಣಿಗಳನ್ನು ಬಳಸಿದ್ದಾರೆ.

ಧರಣಿಯ ಹಿಂದೆ ಎಡಪಂಥೀಯ ಪಕ್ಷದ ಕೈವಾಡ?

ಈ ಪ್ರತಿಭಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಪ್ರತಿಭಟನೆಯ ಹಿಂದೆ ಎಡಪಂಥೀಯ ‘ಫ್ರಾನ್ಸ್ ಅನ್‌ಬೌಡ್’ ಪಕ್ಷ ಇದೆ ಎಂದು ಸರ್ಕಾರ ಆರೋಪಿಸಿದ್ದು, ಪಕ್ಷದ ನಾಯಕರು ಇದನ್ನು ತಳ್ಳಿಹಾಕಿದ್ದಾರೆ. ಶಿಕ್ಷಣ ಸಚಿವರ ಪ್ರಕಾರ, ಪ್ರತಿಭಟನೆ ಶುರುವಾದ ಬಳಿಕ 65 ಸಿಬ್ಬಂದಿ ಹಾಗೂ 170 ವಿದ್ಯಾರ್ಥಿಗಳು ಗಾಯಗೊಂಡಿದ್ದು, 100ಕ್ಕೂ ಹೆಚ್ಚು ಶಾಲೆಗಳಿಗೆ ಗಂಭೀರ ಹಾನಿಯಾಗಿದೆ.

ಇದನ್ನೂ ಓದಿ: ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಬರ್ತ್‌ಡೇ; ಸೆಲ್ಫಿ ನೆಪದಲ್ಲಿ ಕೆನ್ನೆ ಗಿಂಡಿ ಓಡಿದ ಅಭಿಮಾನಿ! | Rachita Ram

ಪೋಷಕರು ಮಕ್ಕಳನ್ನು ಪ್ರತಿಭಟನೆಗೆ ಕಳುಹಿಸದಂತೆ ಸರ್ಕಾರ ಮನವಿ ಮಾಡಿದೆ. ಮಕ್ಕಳಿಂದ ಉಂಟಾಗುವ ಹಾನಿಗೆ ಪೋಷಕರನ್ನೂ ಹೊಣೆಗಾರರನ್ನಾಗಿ ಮಾಡುವುದಾಗಿ ನ್ಯಾಯ ಸಚಿವ ಜೆರಾಲ್ಡ್ ದರ್ಮನಿನ್ ಹೇಳಿದ್ದಾರೆ. ಇದುವರೆಗೆ ಸುಮಾರು 2,000 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶೇ.90ರಷ್ಟು ಮಂದಿ ಅಪ್ರಾಪ್ತರು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net