

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳು ಆಶ್ರಯ ತಾಣಗಳಲ್ಲ. ಅವು ನಿಮ್ಮ ಬದುಕಿನ ಮಾರ್ಗದರ್ಶಕವು ಹೌದು. ಸರ್ಕಾರ ಎಲ್ಲ ಸೌಲಭ್ಯ ನೀಡಿದೆ. ಆ ಸೌಲಭ್ಯ ಬಳಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅಭಿಪ್ರಾಯಪಟ್ಟರು.
ಗಾಡಿಕೊಪ್ಪದ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮನೆ, ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 239ನೇ ತಿಂಗಳ ಸಂಭ್ರಮ ಮತ್ತು ಗುರುಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು.
ಭವ್ಯ ಭಾರತದ ಜಾತ್ಯತೀತ ಮನೋಭಾವ ರೂಪುಗೊಳ್ಳಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಜಾತಿಗೆ, ಧರ್ಮಕ್ಕೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಬದಲು ಎಲ್ಲರನ್ನೂ ಒಳಗೊಂಡ ನಿಲಯದ ವ್ಯವಸ್ಥೆ ಮಾಡಿದರೆ ಭಾವೈಕ್ಯತೆಯ ಅರಿವು ಮಕ್ಕಳಿದ್ದಾಗಲೇ ರೂಪುಗೊಳ್ಳಲು ಪ್ರಭಾವ ಬೀರುತ್ತದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ ಮಾತನಾಡಿ, ಓದು, ಬರಹ ಬಿಟ್ಟರೆ ಪ್ರಪಂಚದ ಅರಿವಿಲ್ಲದಂತೆ ವಿದ್ಯಾರ್ಥಿ ಜೀವನ ಕಳೆದುಹೋಗುತ್ತದೆ. ತ್ರೈಮಾಸಿಕ ಪರೀಕ್ಷೆ ಆಚೆ ನಾವು ಓದುವ, ಅರಿಯುವ ಅಗತ್ಯ ತುಂಬಾ ಇದೆ. ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿ ರೂಪಿಸಿಕೊಳ್ಳಲು ಇಂತಹ ಕಾರ್ಯಕ್ರಮ ಅವಶ್ಯವಿದೆ. ಕನ್ನಡದಲ್ಲಿ ಏನೇಲ್ಲ ಇದೆ ಅನ್ನುವುದನ್ನು ಅದರೊಳಗೆ ಪ್ರವೇಶಿಸಿ ನೋಡಬೇಕು. ನಮಗೆ ಒತ್ತಡದ ಬದುಕಿನ ಜತೆಗೆ ಸಾಹಿತ್ಯ, ಸಂಗೀತದ ಸಹವಾಸ ಮನಸ್ಸು ಹಗುರಾಗಲು ನೆರವಾಗುತ್ತೆ. ಕನ್ನಡ ಭಾಷೆಯನ್ನು ಮರೆಯದೆ ಚನ್ನಾಗಿ ಕಲಿಯುವುದು ಮುಖ್ಯ ಎಂದರು.
ಗಾಯಕಿ ನಳಿನಾಕ್ಷಿ, ಕೆ.ಎಸ್.ಮಂಜಪ್ಪ, ಸವಿತಾ, ಮಹಾದೇವಿ, ನಿಲಯಾರ್ಥಿ ಬೀದರ್ ಜಿಲ್ಲೆಯ ಖಾದರ್ ಹಾಡು ಹೇಳಿದರು. ಕವಿಗಳಾದ ಎಂ.ನವೀನ್‌ಕುಮಾರ್, ನಿಲಯಾರ್ಥಿ ಆಂಜನೇಯ ತುಮಕೂರು ಕವನ ವಾಚಿಸಿದರು. ಪ್ರೊ. ಸತ್ಯನಾರಾಯಣ ಹನಿಗವನ ವಾಚಿಸಿದರು. ಶಿಕ್ಷಕರಾದ ಮೋಹನ್ ಕುಮಾರ್, ನಿಲಯಾರ್ಥಿ ಯಶವಂತ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಗುರುಪೂರ್ಣಿಮೆ ಪ್ರಯುಕ್ತ ಡಾ. ಶಾಂತಾರಾಮ ಪ್ರಭು, ಎಂ.ಎಸ್.ರಜತ್‌ಕುಮಾರ್ ಅವರನ್ನು ಗೌರವಿಸಲಾಯಿತು. ನಿಲಯ ಪಾಲಕ ಎಂ.ಎಸ್.ರಜತ್‌ಕುಮಾರ್, ಶಿಕ್ಷಕಿ ಅನಿತಾ ಸೂರ್ಯ, ಡಿ. ಗಣೇಶ್, ಭೈರಾಪುರ ಶಿವಪ್ಪಗೌಡ, ನಾರಾಯಣ ಉಪಸ್ಥಿತರಿದ್ದರು.
ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ ಎಲ್ಲರೂ ನಮಗೆ ಗುರುಗಳೇ. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆವು. ಗುರು ಶಿಷ್ಯ ಪರಂಪರೆ ಕುರಿತಾಗಿ ಭಾರತವು ವಿಶ್ವದ ಗಮನಸೆಳೆದಿದೆ. ಅಧ್ಯಯನ ವಿಚಾರವಾಗಿದೆ. ಪ್ರತಿಯೊಬ್ಬರ ಬದುಕಿನ ಸಾಧನೆಗೆ ಗುರುವಿನ ಪಾತ್ರ ಪ್ರಾಮುಖ್ಯತೆ ಪಡೆದಿರುತ್ತದೆ.
-ಡಾ. ಶಾಂತಾರಾಮ ಪ್ರಭು, ಹಿರಿಯ ಸಾಹಿತಿ