ಎದೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

death
Published on

ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಬಿದರಕಲ್ಲು ಬಳಿಯ ತಿರುಮಲಪುರ ನಿವಾಸಿ ವಿಶು ಉತ್ತಪ್ಪ (19) ಮೃತ. ಕೊಡಗು ಮೂಲದ ರವಿ ತಿಮ್ಮಯ್ಯ ದಂಪತಿಯ ಏಕೈಕ ಪುತ್ರ ವಿಶು. ಉದ್ಯೋಗ ಅರಸಿ ರವಿ ತಿಮ್ಮಯ್ಯ ಕುಟುಂಬ ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ನೈಸ್ ಟೋಲ್‌ನಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡುವ ಕೆಲಸವನ್ನು ರವಿ ತಿಮ್ಮಯ್ಯ ಮಾಡುತ್ತಿದ್ದರು.

ಹೆಸರುಘಟ್ಟದ ಆರ್.ಆರ್. ಕಾಲೇಜುನಲ್ಲಿ ವಿಶು, ಪ್ರಥಮ ವರ್ಷದ ಬಿಇ ಓದುತ್ತಿದ್ದ. ರವಿ ತಿಮ್ಮಯ್ಯ, ಕೊಡಗಿನಲ್ಲಿ ಪರವಾನಗಿ ಪಡೆದ ಡಬಲ್ ಬ್ಯಾರಲ್ ಗನ್ ಹೊಂದಿದ್ದರು. ಕೆಲಸ ಮಾಡುತ್ತಿದ್ದ ಕಡೆ ಅಗತ್ಯ ಇಲ್ಲದಿದ್ದರಿಂದ ಗನ್ ಮನೆಯಲ್ಲಿಟ್ಟು ಹೋಗುತ್ತಿದ್ದರು. ಬುಧವಾರ ಮಧ್ಯಾಹ್ನ ವಿಶು ಮನೆಯಲ್ಲಿದ್ದ. ಇದೇ ವೇಳೆ ತಂದೆ-ತಾಯಿ, ಮನೆಗೆ ದಿನಸಿ ತರಲು ಚಿಕ್ಕಬಿದರಕಲ್ಲು ಸಮೀಪ ಹೋಗುತ್ತಿದ್ದರು. ಜತೆಗೆ ಮಗನ್ನು ಕರೆದರೂ ಆತ ಹೋಗಿರಲಿಲ್ಲ. ದಂಪತಿ ಕಾರಿನಲ್ಲಿ ಹೋಗಿದ್ದು, ಕೆಲ ಸಮಯದ ಬಳಿಕ ತಾಯಿಗೆ ಕರೆ ಮಾಡಿದ ವಿಶು, ‘ನನ್ನನ್ನು ಕ್ಷಮಿಸಿ’ ಎಂದು ಕೇಳಿದ್ದ. ಅದಕ್ಕೆ ತಾಯಿ ಸಮಾಧಾನಪಡಿಸಿ, ‘ಈಗಲೂ ಬರುವುದಾದರೆ ಹೇಳು.. ವಾಪಸ್ ಬಂದು ಕರೆದುಕೊಂಡು ಬರುತ್ತೇವೆ’ ಎಂದಿದ್ದರು.

‘ಇಲ್ಲ ಬರುವುದಿಲ್ಲ’ ಎಂದು ಹೇಳಿ ಕಾಲ್ ಸ್ಥಗಿತ ಮಾಡಿದ್ದ. ಸಂಜೆ 6.45ರಲ್ಲಿ ಮತ್ತೆ ತಾಯಿಗೆ ಕರೆ ಮಾಡಿದ್ದ, ವಿಶುಅಳುತ್ತಿದ್ದ. ತಕ್ಷಣವೇ ಕಾರಿನಲ್ಲಿ ತಂದೆ-ತಾಯಿ ವಾಪಾಸು ಮನೆಗೆ ಬಂದಾಗ ಗಾಯಗೊಂಡ ಸ್ಥಿತಿಯಲ್ಲೇ ವಿಶು ಬಾಗಿಲು ತೆಗೆದಿದ್ದ. ಗಾಬರಿಗೊಂಡ ತಂದೆ-ತಾಯಿ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಲಿಸದೆ ವಿದ್ಯಾರ್ಥಿ, ಮೃತಪಟ್ಟಿದ್ದಾನೆ. ವಿಶು ಉತ್ತಪ್ಪ ಎಡಭಾಗದ ಎದೆಗೆ ಗುಂಡು ಹಾರಿಸಿಕೊಂಡಿದ್ದು, ಹೃದಯದ ಪಕ್ಕದಲ್ಲಿ ಹಾದುಹೋಗಿತ್ತು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net