ಸಹ್ಯಾದ್ರಿ ಉತ್ಸವದಲ್ಲಿ ವಿದ್ಯಾರ್ಥಿನಿಯರ ಸಂಭ್ರಮ

sahyadri
ಕುವೆಂಪು ವಿವಿಯಲ್ಲಿ ಸೋಮವಾರ ಆರಂಭವಾದ ಸಹ್ಯಾದ್ರಿ ಉತ್ಸವದ ಸಾಂಸ್ಕೃತಿಕ ಪಥ ಸಂಚಲನ ಗಮನ ಸೆಳೆಯಿತು.
Published on

ಶಿವಮೊಗ್ಗ: ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಕುವೆಂಪು ವಿವಿಯ ಸಹ್ಯಾದ್ರಿ ಉತ್ಸವ ಮತ್ತೆ ಆರಂಭವಾಗಿರುವುದು ಖುಷಿ ತಂದಿದೆ. ಹಿರಿಯ ವಿದ್ಯಾರ್ಥಿಗಳಿಂದ ಸಹ್ಯಾದ್ರಿ ಉತ್ಸವದ ಬಗ್ಗೆ ಕೇಳಿ ತಿಳಿದುಕೊಂಡಿದ್ದೆವು. ಈಗ ನಾವೇ ಅದನ್ನು ಖುದ್ದು ಅನುಭವಿಸುತ್ತಿರುವ ಸಂಭ್ರಮ ಮೂಡಿಸಿದೆ ಎಂದು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಅನಿಸಿಕೆ ವ್ಯಕ್ತಪಡಿಸಿದರು.

ಸಹ್ಯಾದ್ರಿ ಉತ್ಸವವನ್ನು ಹಬ್ಬದ ರೀತಿಯಲ್ಲಿ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ವೇಷಭೂಷಣ ಕಲೆ, ಸಂಸ್ಕೃತಿಯನ್ನು ಇದು ಪ್ರತಿಬಿಂಬಿಸುತ್ತಿದೆ. ಕಲಾ ಮೇಳಗಳು ಒಂದಕ್ಕಿಂತ ಮತ್ತೊಂದು ಉತ್ತಮವಾಗಿವೆ. ಇದನ್ನು ಸ್ಪರ್ಧೆಯಂತೆ ಭಾವಿಸದೇ ಸಂಭ್ರಮದಿಂದ ಪಾಲ್ಗೊಳ್ಳಬೇಕು ಎಂದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ವಿದ್ಯಾರ್ಥಿನಿ ಇಂಚರಾ ಅಭಿಪ್ರಾಯ ವ್ಯಕ್ತಪಡಿಸಿದರು.

ಸಹ್ಯಾದ್ರಿ ಉತ್ಸವದ ಸಮಾರೋಪವು ಡಿ.11ರ ಮಧ್ಯಾಹ್ನ 2ಕ್ಕೆ ನಡೆಯಲಿದೆ. ನಟ, ನಿರ್ದೇಶಕ ಡಾ.ರಾಧಾಕೃಷ್ಣ ಪಲ್ಲಕ್ಕಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕುಲಸಚಿವರಾದ ಎ.ಎಲ್.ಮಂಜುನಾಥ್, ಪ್ರೊ.ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್ ಮುಂತಾದವರು ಭಾಗವಹಿಸಲಿದ್ದಾರೆ.

ಸಹ್ಯಾದ್ರಿ ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ತಂಡವು ಡಿ.19ರಿಂದ 23ರವರೆಗೆ ನಡೆಯುವ ದಕ್ಷಿಣ ಪ್ರಾಂತೀಯ ವಿಶ್ವವಿದ್ಯಾಲಯಗಳ ಯುವಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ. ಮೂರು ದಿನವೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿವಿ ಸಾಕ್ಷಿಯಾಗಲಿದೆ. ಮೊದಲ ದಿನವಾದ ಸೋಮವಾರ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಚರ್ಮವಾದ್ಯ, ಶಾಸ್ತ್ರೀಯ ತಂತಿ ವಾದ್ಯ, ಭಾರತೀಯ ಲಘು ಸಂಗೀತ ಸ್ಪರ್ಧೆಗಳು ನಡೆದವು.

ಡಿ.10ರಂದು ಪಾಶ್ಚಿಮಾತ್ಯ ಸಂಗೀತ, ಭಾರತೀಯ ಹಾಗೂ ಪಾಶ್ಚಾತ್ಯ ಸಮೂಹ ಗಾಯನ, ಜನಪದ ಹಾಗೂ ಶಾಸ್ತ್ರೀಯ ನೃತ್ಯ, ರಸಪ್ರಶ್ನೆ, ಸಿದ್ದಭಾಷಣ, ಚರ್ಚಾ ಸ್ಪರ್ಧೆ, ಏಕಾಂಕ ನಾಟಕ, ಮೂಕಾಭಿನಯ, ಪ್ರಹಸನ, ಅನುಕರಣೆ, ಸ್ಥಳದಲ್ಲೇ ಚಿತ್ರ ಬರೆಯುವುದು, ಜೇಡಿ ಮಣ್ಣಿನಲ್ಲಿ ಆಕೃತಿ ರಚನೆ, ರಂಗೋಲಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net