

ಆಂಧ್ರಪ್ರದೇಶ: ಎಷ್ಟೇ ಕಠಿಣ ಕಾನೂನು ರೂಪಿಸಿದರೂ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆಯುವ ರ್ಯಾಗಿಂಗ್ ಮಾತ್ರ ತಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಹಲವು ವಿದ್ಯಾರ್ಥಿಗಳು ರ್ಯಾಗಿಂಗ್ ಕಾರಣದಿಂದ ನೊಂದಿದ್ದಾರೆ. ಅಷ್ಟೇ ಅಲ್ಲಾ, ರ್ಯಾಗಿಂಗ್ನ ಹುಚ್ಚಾಟ ಅನೇಕ ವಿದ್ಯಾರ್ಥಿಗಳ ಜೀವಕ್ಕೇ ಆಪತ್ತು ತಂದೊಡ್ಡಿದಂತಹ ಪ್ರಕರಣಗಳು ನಡೆದಿವೆ.
ಇದೀಗ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಸೇರಿಕೊಂಡು, ಒಬ್ಬನನ್ನು ರ್ಯಾಗಿಂಗ್ ಮಾಡಿದ್ದಾರೆ. ಈ ವೇಳೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ರ್ಯಾಗಿಂಗ್ ಮಾಡುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಸಾಕಷ್ಟು ಆಕ್ರೋಶ ಕೇಳಿ ಬರುತ್ತಿದೆ.
ವಿದ್ಯಾರ್ಥಿಯೊಬ್ಬನನ್ನು ಹಾಸ್ಟೆಲ್ನ ಕೋಣೆಯೊಳಗೆ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಪಿವಿಸಿ ಪೈಪ್ ಹಾಗೂ ಕೋಲುಗಳಿಂದ ದೇಹದ ವಿವಿಧ ಭಾಗಕ್ಕೆ ಹೊಡೆದಿದ್ದಾರೆ. ಇಷ್ಟೇ ಅಲ್ಲದೆ, ಇಸ್ತ್ರಿ ಪೆಟ್ಟಿಗೆಯಿಂದ ಯುವಕನ ದೇಹಕ್ಕೆ ಬಿಸಿ ಮುಟ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯುವಕ ಎಷ್ಟೇ ಗೋಳಾಡಿಕೊಂಡರೂ ಸುಮ್ಮನಾಗದೆ, ನಿರಂತರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಯುವಕರನ್ನು ಬಂಧಿಸಿದ್ದಾರೆ. ಯುವಕನ ಮೈಮೇಲೆ ಹಲವು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿಗಳು ಹೊಡೆಯುತ್ತಿರುವಾಗಲೇ, ಬಲಿಪಶುವಾಗಿರುವ ವಿದ್ಯಾರ್ಥಿ ಕ್ಷಮೆಯಾಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.