

ಸೊರಬ: ಚನ್ನಯ ಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅಖಿಲ ಕರ್ನಾಟಕ ಚನ್ನಯ (ಬಲಗೈ) ಸಮಾಜದ ಅಧ್ಯಕ್ಷ ಬಸವರಾಜ ದೊಡ್ಮನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅಖಿಲ ಕರ್ನಾಟಕ ಚನ್ನಯ (ಬಲಗೈ) ಸಮಾಜ ಹಾಗೂ ಅಭಿವೃದ್ಧಿ ಹೋರಾಟ ರಾಜ್ಯ ಸಮಿತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಸೇರಿ ರಾಜ್ಯದಲ್ಲಿ ಚನ್ನಯ್ಯ ಸಮಾಜವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿ ನೀಡಿದ್ದರೂ ಸೌಲಭ್ಯಗಳು ಪ್ರಬಲ ಜಾತಿಗಳ ಪಾಲಾಗುತ್ತಿದೆ. ರಾಜಕೀಯದಲ್ಲೂ ಯಾವುದೇ ಪ್ರಾತಿನಿಧ್ಯ ಸಿಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜಾತಿಗಣತಿ ವರದಿ ಬಿಡುಗಡೆಗೆ ಮುಂದಾಗಿದೆ. ಈ ಮೂಲಕ ಹಿಂದುಳಿದ ಸಮುದಾಯಗಳಿಗೆ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ ಚನ್ನಯ ಸಮಾಜಕ್ಕೆ ಒಳಮೀಸಲಾತಿ ನೀಡಬೇಕು. ನಮ್ಮ ಸಮಾಜಕ್ಕೆ ಧಕ್ಕಬೇಕಾದ ಸೌಲಭ್ಯ ಅನ್ಯರ ಪಾಲಾಗುತ್ತಿದೆ. ಹಾಗಾಗಿ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮತ್ತು ಶಕ್ತಿ ಪ್ರದರ್ಶನವಾಗಬೇಕು. ವಿವಿಧೆಡೆ ಚನ್ನಯ ಸಮಾಜದವರನ್ನು ಆದಿಕರ್ನಾಟಕ ಎಂದು ಗುರುತಿಸಲಾಗುತ್ತಿದೆ. ಚನ್ನಯ ಸಮಾಜದ ಸಂಸ್ಕಾರ, ವಿಧಿವಿಧಾನಗಳನ್ನು ಅನುಸರಿಸುತ್ತಿರುವವರಿಗೆ ಸರ್ಕಾರ ಜಾತಿ ಪ್ರಮಾಣ ಪತ್ರದಲ್ಲಿಯೂ ಚನ್ನಯ ಸಮಾಜವೆಂದೇ ನಮೂದಿಸಬೇಕು ಎಂದು ಆಗ್ರಹಿಸಿದರು.
ಅಖಿಲ ಕರ್ನಾಟಕ ಚನ್ನಯ ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜಪ್ಪ, ಉಪಾಧ್ಯಕ್ಷ ನವೀನ್‌ಕುಮಾರ್, ರಂಗಪ್ಪ, ಎ.ಕೆ.ನಾಗರಾಜ, ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪ, ಜಿಲ್ಲಾಧ್ಯಕ್ಷ ರುದ್ರಪ್ಪ, ತಾಲೂಕು ಅಧ್ಯಕ್ಷ ನಾಗರಾಜ, ರಾಜ್ಯ ಸಮಿತಿ ಸದಸ್ಯರಾದ ರೇವಣಪ್ಪ, ರೇವಣಪ್ಪ, ಪ್ರಮುಖರಾದ ಎಚ್.ಕೆ.ಶಿವಾನಂದ, ಬಿ.ಎಚ್.ಹೊಳೆಲಿಂಗಪ್ಪ, ಹರೀಶ್, ಶ್ರೀಕಾಂತ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ತಳವಾರ್, ಹಾವೇರಿ ಜಿಲ್ಲಾಧ್ಯಕ್ಷ ಚಂದ್ರಕಾಂತ್, ಮಂಜಪ್ಪ, ಜಗದೀಶ್, ತಿಮ್ಮಪ್ಪ, ರಾಜು ಆಚಾರ್, ಹರೀಶ್, ವೀರಪ್ಪ ಇತರರಿದ್ದರು.