ಆಪರೇಟರ್​ ಇಲ್ಲದೆ ಆಧಾರ್​ಗಾಗಿ ಪರದಾಟ

klr vemgal,webp
Published on

> ಆರ್​.ಮುನಿರಾಜು, ಕೋಲಾರ/ವೇಮಗಲ್​

ತಾಲೂಕಿನ ವೇಮಗಲ್​ ನಾಡಕಚೇರಿಯಲ್ಲಿ ಆಧಾರ್​ ಆಪರೇಟರ್​ ಕಳೆದ 10 ದಿನಗಳಿಂದ ಕಚೇರಿಗೆ ಗೈರಾಗಿದ್ದು, ಸಾರ್ವಜನಿಕರು ಆಧಾರ್​ ಸೇವೆಗಾಗಿ ಪರದಾಡುವಂತಾಗಿದೆ.

ವೇಮಗಲ್​ ನಾಡಕಚೇರಿಯ ಆಪರೇಟರ್​ ಕಳೆದ ತಿಂಗಳಷ್ಟೇ ಕೆಲಸಕ್ಕೆ ನಿಯೋಜನೆಗೊಂಡಿದ್ದು, ಆರಂಭದಲ್ಲಿ 15 ದಿನ ಮಾತ್ರ ಕಚೇರಿಗೆ ಬಂದು, ಈಗ ಬರುತ್ತಿಲ್ಲ. ಈ ಬಗ್ಗೆ ಸ್ಥಳಿಯ ಆಡಳಿತ ಸಹ ಯಾವುದೇ ಮಾಹಿತಿ ನೀಡದ ಪರಿಣಾಮ ಜನರು ಆಧಾರ್​ ಸೇವೆಗಾಗಿ ದಿನವಿಡೀ ನಾಡಕಚೇರಿ ಮುಂದೆ ಠಿಕಾಣಿ ಹೂಡುವಂತಾಗಿದೆ.

ಈ ಹಿಂದಿನ ಆಪರೇಟರ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸೇವೆಗಳಿಗಾಗಿ ಸಾರ್ವಜನಿಕರು ನಾಡಕಚೇರಿಗೆ ಹೋದರೆ ಕೇವಲ 5ರಿಂದ 10 ನಿಮಿಷಗಳಲ್ಲಿ ಕೆಲಸ ಮುಗಿಸಿಕೊಡುತ್ತಿದ್ದರು. ಆದರೆ, ತಿಂಗಳ ಹಿಂದೆ ನಿಯೋಜನೆಗೊಂಡಿರುವ ಆಪರೇಟರ್​ ಕೆಲಸಕ್ಕೆ ಸರಿಯಾಗಿ ಬರದಿರುವುದು ಆಧಾರ್​ ಸೇರಿದಂತೆ ಗ್ರಾಮಒನ್​ನ ವಿವಿಧ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಂಚದ ಆರೋಪದ ಹಿನ್ನೆಲೆಯಲ್ಲಿ ವರ್ಗಾವಣೆ

ಸದ್ಯದ ಆಪರೇಟರ್​ ಈ ಹಿಂದೆ ಕೋಲಾರದ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿರುದ್ಧ ಲಂಚಕ್ಕೆ ಬೇಡಿಕೆ ಸೇರಿ ಅನೇಕ ದೂರುಗಳು ಕೇಳಿ ಬಂದಿದ್ದವು. ಪರಿಣಾಮ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವೇಮಗಲ್​ ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್​ ಆಪರೇಟರ್​ನನ್ನು ಕೋಲಾರದ ಕಚೇರಿಗೆ ಹಾಗೂ

ಕೋಲಾರದ ತಾಲೂಕು ಕಚೇರಿಯಲ್ಲಿನ ಆಪರೇಟರ್​ನನ್ನು ವೇಮಗಲ್​ ನಾಡಕಚೇರಿಗೆ ನಿಯೋಜನೆ ಮಾಡಲಾಗಿದೆ.

ಬರೀ 15 ದಿನ ಕಾರ್ಯನಿರ್ವಹಣೆ

ಸದ್ಯದ ಆಪರೇಟರ್​ ನಿಯೋಜನೆಗೊಂಡ ಆರಂಭದಲ್ಲಿ ಸುಮಾರು 15 ದಿನ ಮಾತ್ರ ಕಾರ್ಯನಿರ್ವಹಿಸಿ, 10 ದಿನಗಳಿಂದ ಕಾರ್ಯನಿರ್ವಹಿಸಲು ಬಂದಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಎಲ್ಲ ಸೇವೆಗಳಿಗೆ ಆಧಾರ್​ ಕಡ್ಡಾಯವಾಗಿದೆ. ಹಾಗಾಗಿ ಆಧಾರ್​ ಇಂದುಗೊಳಿಸುವುದು (ಅಪಡೇಟ್​), ಹೊಸದಾಗಿ ಆಧಾರ್​ ನೋಂದಣಿ, ವಿವಿಧ ಸೇವೆಗಳಿಗೆ ಆಧಾರ್​ ಜೋಡಣೆ ಸೇರಿ ಯಾವ ಸೇವೆಗಳೂ ಇಲ್ಲದೇ ಜನ ಪರದಾಡುತ್ತಿದ್ದಾರೆ.

ಕೋಟ್​)))

108 ಹಳ್ಳಿಗಳಿಗೆ ಹೋಬಳಿ ಕೇಂದ್ರ, ಪಟ್ಟಣ ಪಂಚಾಯಿತಿ ಕೇಂದ್ರಸ್ಥಾನ ವೇಮಗಲ್​ ನಾಡಕಚೇರಿಗೆ ಸಮರ್ಥ ಆಪರೇಟರ್​ ನಿಯೋಜನೆ ಮಾಡದೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಕೂಡಲೇ ಬೇರೆ ಆಪರೇಟರ್​ನನ್ನು ನಿಯೋಜಿಸಿ.

> ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥ

ಕೋಟ್​))

ಹೊಸದಾಗಿ ನಿಯೋಜನೆಗೊಂಡ ಆಧಾರ್​ ಆಪರೇಟರ್​ ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದಾರೆ. ಅವರ ಬದಲಾಗಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಆಧಾರ್​ ಆಪರೇಟರ್​ ಅವರನ್ನೇ ಮರಳಿ ಕಳುಹಿಸುವಂತೆ ತಹಸೀಲ್ದಾರ್​ ಅವರಿಗೆ ಮನವಿ ಮಾಡಿದ್ದು, ಶ್ರೀದಲ್ಲೇ ಸಮಸ್ಯೆ ಬಗೆಹರಿಸಲಾಗುವುದು.

> ಬಿ.ಹೇಮಲತಾ, ಉಪ ತಹಸೀಲ್ದಾರ್​ ವೇಮಗಲ್​

ಕೋಟ್​))))

ವೇಮಗಲ್​&-ಕುರುಗಲ್​ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಆಧಾರ್​ ಆಪರೇಟರ್​ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯದಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಆಗ ಸ್ಥಳಿಯ ಆಡಳಿತದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ.

> ವಿ.ಎಂ.ಮುನಿಯಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net