

ಸಕಲೇಶಪುರ: ಪಹಲ್ಗಾಮ್‌ನಲ್ಲಿ ಹಿಂದುಗಳ ನರಮೇಧ ಖಂಡಿಸಿ ಪಟ್ಟಣದಲ್ಲಿ ಗುರುವಾರ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಅಂಗವಾಗಿ ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದ ಪ್ರತಿಭಟನಾಕಾರರು ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿವರಗೆ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಕಚೇರಿ ಗುಮಾಸ್ತ ನವೀನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಚಿಂತಕ ಪ್ರೊ.ಅಣ್ಣಪ್ಪಸ್ವಾಮಿ ಮಾತನಾಡಿ, ಸ್ವಾತಂತ್ರ ಬಂದ 70 ವರ್ಷಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಅರಳಿದ್ದು ಜನರು ಶಾಂತಿ ಸಹಬಾಳ್ವೆಯೆಡೆಗೆ ಹೊರಳಿತ್ತಿದ್ದು ಕಣಿವೆ ಅಭಿವೃದ್ಧಿಯತ್ತ ಮುಖ ಮಾಡಿದೆ. ಈ ಬೆಳವಣಿಗೆಯಿಂದ ಹತಾಶಗೊಂಡಿರುವ ಉಗ್ರಗಾಮಿಗಳು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಸದ್ಯ ಬಿಗಿ ಕಾನೂನು ಕ್ರಮದಿಂದಾಗಿ ಹಲವು ಹಿಂಸಾ ಕೃತ್ಯಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಆದರೆ, ದುರದೃಷ್ಟಕರ ಸೈನಿಕರ ಕಣ್ತಪ್ಪಿಸಿ ಈ ದಾಳಿ ನಡೆದಿದ್ದು, ಈ ದಾಳಿಯಲ್ಲಿ ನವಜೋಡಿ ಸೇರಿದಂತೆ ನೌಕದಳದ ಸಿಬ್ಬಂದಿ ಬಲಿಯಾಗಿರುವುದು ದುರದೃಷ್ಟಕರ ಎಂದರು.
ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನಲಾಗುತ್ತದೆ. ಆದರೆ ಧರ್ಮ ಆಧರಿಸಿ ಹಿಂದುಗಳನ್ನು ಕೊಂದಿರುವುದು ಅಕ್ಷಮ್ಯ. ಶಾಂತಿಯೆಡೆಗೆ ಮರಳುತ್ತಿದ್ದ ಕಣಿವೆಯನ್ನು ಮತ್ತೆ ರಕ್ತಸಿಕ್ತಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ದಾಳಿ ನಡೆಸಲು ಸ್ಥಳೀಯರು ಸಹಕರಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದ್ದರಿಂದ, ಭಯೋತ್ಪದಕರರಲ್ಲದೆ, ದಾಳಿಗೆ ಸಹಕಾರ ನೀಡಿದವರನ್ನೂ ಸಂಹಾರ ನಡೆಸುವುದರಿಂದ ಮಾತ್ರ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಭಯೋತ್ಪಾದನೆಯನ್ನು ಎದುರಿಸಲು ಸಾಧ್ಯ ಎಂದರು.
ಪ್ರತಿಭಟನೆಯಲ್ಲಿ ಹಿಂದು ಸಂಘಟನೆ ಮುಖಂಡರಾದ ಹರೀಶ್ ಕರಡಿಗಾಲ, ನಂದೀಶ್, ವಳಲಹಳ್ಳಿ ಅಶ್ವತ್ಥ್, ವಿಜಯಕುಮಾರ್, ರಘು ಚಂಪಕನಗರ ಮುಂತಾದವರು ಭಾಗವಹಿಸಿದ್ದರು.