

ಕೆ.ಆರ್.ನಗರ: ಬಸವಣ್ಣನವರು ಕಾಯಕ ಸಿದ್ಧಾಂತ ಬೋಧಿಸಿ ದುಡಿಯುವ ಜನರ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಮಹಾನ್ ಪುರುಷ. ಇವರ ತತ್ವ ಮತ್ತು ಆರ್ದಶಗಳನ್ನು ಯುವ ಜನತೆ ಮೈಗೂಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಬಸವಣ್ಣನವರ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಮೂಢನಂಬಿಕೆ ಅಸ್ಪಶ್ಯತೆ, ಜಾತಿ ವರ್ಗ, ಹಾಗೂ ಚಾತುವರ್ಣ ಸಿದ್ಧಾಂತ ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವ ಗುರುವಾಗಿದ್ದು, 12ನೇ ಶತಮಾನದ ಅವರ ವಚನಗಳು ಮನುಕುಲಕ್ಕೆ ದಾರಿ ದೀಪವಾಗಿದ್ದು ಇದನ್ನು ಜನತೆ ಅರಿತು ನಡೆಯಬೇಕೆಂದರು.
ನಗರದ ಬಸವೇಶ್ವರ ಬಡಾವಣೆಯಲ್ಲಿರುವ ದೇವಿರಮ್ಮ ಶಿಶುವಿಹಾರ ಮೈದಾನದಲ್ಲಿ ಹಿರಿಯ ನಾಗರಿಕರು ಮತ್ತು ಸಾರ್ವಜನಿಕರು ವಾಯುವಿಹಾರ ಮಾಡಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸುವ ಸಲುವಾಗಿ ಪುರಸಭೆ ವತಿಯಿಂದ 50 ಲಕ್ಷ ರೂ. ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಸವೇಶ್ವರ ಮಹಿಳಾ ಸ್ವ-ಸಹಾಯ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡುವಂತೆ ಸಂಘದವರು ಮನವಿ ಸಲ್ಲಿಸಿದ್ದು ಮೊದಲ ಹಂತದಲ್ಲಿ ಶಾಸಕರ ನಿಧಿಯಿಂದ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ ಶಾಸಕರು, ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗೆ ನೀಲಿನಕ್ಷೆ ತಯಾರು ಮಾಡಲಾಗಿದ್ದು, ಅಭಿವೃದ್ಧಿ ಕೆಲಸ ಮಾಡಲು ಸ್ಥಳೀಯರು ಸಹಕಾರ ನೀಡಬೇಕು ಎಂದು ಕೋರಿದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭೆ ಅಧ್ಯಕ್ಷ ಶಿವುನಾಯಕ್, ವೀರಶೈವ ಮಹಾ ಸಭಾದ ಅಧ್ಯಕ್ಷ ಕೆಂಪರಾಜು ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಮಂಜುಳಾ ಚಿಕ್ಕವೀರು, ಶಂಕರ್‌ಸ್ವಾಮಿ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಲ್.ಶಂಕರ್‌ಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಮುಖಂಡರಾದ ತಿಮ್ಮಶೆಟ್ಟಿ, ರೇಖಾ ರವೀಂದ್ರ, ಮನೋಹರಿ ನಾಗರಾಜ್, ಸಣ್ಣಲಿಂಗಪ್ಪ, ಕೆ.ಸಿ.ಹರೀಶ್, ವೃಷಬೇಂದ್ರ ಮತ್ತಿತರರು ಹಾಜರಿದ್ದರು.