

ಸಾಗರ: ಶಿಕ್ಷಣದಲ್ಲಿ ಮೌಲ್ಯ ಅತಿಮುಖ್ಯ. ಮಕ್ಕಳ ಶ್ರೇಯೋಭಿವೃದ್ಧಿ ಹಂಬಲದೊಂದಿಗೆ ಶಿಕ್ಷಕರು ಕೆಲಸ ಮಾಡಬೇಕು. ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ಸಾಗರ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಪಿಟಿ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶಿಕ್ಷಕರು ಸದಾ ಜಾಗೃತವಾಗಿರಬೇಕು. ಪ್ರಸಕ್ತ ವಿದ್ಯಮಾನಗಳನ್ನು ಅರಿತುಕೊಂಡು ಪಠ್ಯಕ್ರಮದಲ್ಲಿ ಅಳವಡಿಸಿ ಮಕ್ಕಳಿಗೆ ಬೋಧಿಸಬೇಕು. ಪ್ರಾಮಾಣಿಕತೆಯಿಂದ ಶಿಕ್ಷಕರು ಕೆಲಸ ಮಾಡಿದರೆ ಅಕ್ಷರವಂತ ಸಮಾಜ ನಿರ್ಮಾಣ ಸಾಧ್ಯವಿದೆ. ಕಲಿಸುವ ಶಿಕ್ಷಕರಿಗೆ ಯಾವುದೇ ಜಾತಿ, ಧರ್ಮ ಇರದೆ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಬೇಕು. ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎಂದು ಹೇಳಿದರು.
ಮಕ್ಕಳಿಗೆ ಶಿಕ್ಷಕರು ಆದರ್ಶವಾಗಿರುತ್ತಾರೆ. ಮಕ್ಕಳ ಮನಸ್ಥಿತಿ ಅರಿತು ಅವರನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಮಾಡಬೇಕು. ಭಾಷಾ ಪ್ರಬುದ್ಧತೆ ಹೊಂದುವ ಮೂಲಕ ನಮ್ಮ ಭಾಷೆ ಉಳಿಸುವತ್ತ ಗಮನಹರಿಸಬೇಕು. ಕಾಲಕಾಲಕ್ಕೆ ನೀಡುವ ತರಬೇತಿ ಪಡೆದು ಅದನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಇಒ ಪರಶುರಾಮಪ್ಪ, ಡಾ. ಅನ್ನಪೂರ್ಣ, ಜಯಣ್ಣ, ಶಿವಕುಮಾರ್, ಡಾ. ಶಂಕರ ಶಾಸಿ, ವಿ.ಟಿ.ಸ್ವಾಮಿ ಇತರರಿದ್ದರು.