

ಸೊರಬ: ತಾಲೂಕಿನಲ್ಲಿ ಗೋವುಗಳು ಕಳ್ಳತನ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಕಳ್ಳತನ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣಾ ವೇದಿಕೆ, ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಪ್ರಮುಖರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಹಿಂದು ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದೆ. ಗೋಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ರಕ್ಷಣೆಗೆ ಹೋದರೂ ಸರ್ಕಾರ ಅದನ್ನು ಅಪರಾಧ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಬಜರಂಗದಳದ ವಿಭಾಗೀಯ ಸಂಚಾಲಕ ರಾಜೇಶ್ ಗೌಡ ದೂರಿದರು.
ಮಾನವೀಯ, ಹಿಂದು ಧಾರ್ಮಿಕ, ಆರ್ಥಿಕ, ಆರೋಗ್ಯ ದೃಷ್ಟಿಯಿಂದ ಗೋವುಗಳನ್ನು ಸಂರಕ್ಷಣೆ ಮಾಡಬೇಕು. ಗೋವು ಸಂರಕ್ಷಣೆ ಮಾಡಬೇಕು ಎಂದು ಸಂವಿಧಾನದಲ್ಲೂ ಉಲ್ಲೇಖವಾಗಿದೆ. ಆದರೆ ಪಟ್ಟಣದಲ್ಲಿ ಗೋವುಗಳ ಕಳ್ಳತನ ಹೆಚ್ಚಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಪ್ರಕರಣಗಳು ನಡೆಯುತ್ತಿದೆ. ಗೋವುಗಳ ರಕ್ಷಣೆ ಸ್ಥಳೀಯ ಆಡಳಿತದ ಹೊಣೆ. ಬಿಡಾಡಿ ದನಗಳಿಗೆ ಪ್ರತಿ ಗ್ರಾಮದಲ್ಲೂ ಗೋಶಾಲೆ ತೆರೆದು ಸರ್ಕಾರವೇ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ಮಾತನಾಡಿ, ಗೋಮಾಳಗಳು ಉಳಿದರೆ ಮಾತ್ರ ಗೋವುಗಳನ್ನು ಉಳಿಸಲು ಸಾಧ್ಯ. ಬ್ರಿಟಿಷರ ಕಾಲದಲ್ಲಿಯೇ ಗೋಮಾಳ ಮೀಸಲಿಟ್ಟಿದ್ದರು. ಆದರೆ ಇವುಗಳನ್ನು ಒತ್ತುವರಿ ಮಾಡಿ ಇಲ್ಲದಂತೆ ಮಾಡಲಾಗಿದೆ. ದೇಸಿ ತಳಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಶ್ರಿ ರಂಗನಾಥ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ, ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಆರ್‌ಎಸ್‌ಎಸ್ ತಾಲೂಕು ಕಾರ್ಯವಾಹ ನಾಗರಾಜ ಗುತ್ತಿ, ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್.ಚಂದನ್, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಬಿ.ಶಶಿಕುಮಾರ್, ಪ್ರಮುಖರಾದ ಜೆ.ನಿರಂಜನ್, ಸಾತ್ವಿಕ್, ಲೋಕೇಶ್, ಉಮಾಶಂಕರ, ಪ್ರಜ್ವಲ್, ನಂದನ್, ಆನಂದ, ವೀರೇಶ್, ವಿನಾಯಕ, ಪಾಣಿ ರಾಜಪ್ಪ, ಎಂ.ಕೆ.ಯೋಗೇಶ್, ವಿಜೇಂದ್ರಗೌಡ, ಸಂಜೀವ ಆಚಾರಿ, ರಂಗನಾಥ ಮೊಗವೀರ್ ಇತರರಿದ್ದರು.