

ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಕರೊನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರು ಮಹಾನಗರದ 4 ಪ್ರದೇಶಗಳನ್ನು ಸೀಲ್ಡೌನ್ ಮಾಡುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ಜಿಲ್ಲೆಗಳಲ್ಲೂ ಇದೇ ಕ್ರಮ ಅನುಸರಿಸಲು ಸೂಚಿಸಿದೆ.
ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕರೆದಿದ್ದ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಭೆ ವಸ್ತುಸ್ಥಿತಿ ಪರಾಮಶಿಸಿ, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಾಪುರ, ವಿ.ವಿ.ಪುರಂ ಹಾಗೂ ಕಲಾಸಿಪಾಳ್ಯಗಳಲ್ಲಿ ಪ್ರಕರಣಗಳು ಹೆಚ್ಚು ವರದಿಯಾದ ಅಕ್ಕಪಕ್ಕದ ಬೀದಿ, ರಸ್ತೆಗಳನ್ನು 14 ದಿನಗಳ ಕಾಲ ಸೀಲ್ಡೌನ್ ಮಾಡಲಿದೆ. ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲೂ ಇದೇ ಕ್ರಮ ಅನುಸರಿಸಲು ಆದೇಶಿಸಲಾಗಿದೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಸೀಲ್ಡೌನ್ ಮಾಡಿದ ಪ್ರದೇಶದಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. ಮಹಾನಗರದ ವಾಣಿಜ್ಯ ಹಾಗೂ ಔದ್ಯೋಗಿಕ ಚಟುವಟಿಕೆಗಳಿಗೆ ಸಮಸ್ಯೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯಿಡಲು ತೀರ್ವನಿಸಲಾಗಿದೆ ಎಂದರು.
ರಾಜ್ಯಕ್ಕೆ ‘ಅಗ್ನಿ ಪರೀಕ್ಷೆ’: ರಾಜ್ಯವು ಮುಂದಿನ 15 ದಿನಗಳ ಕಾಲ ‘ಅಗ್ನಿ ಪರೀಕ್ಷೆ’ ಎದುರಿಸಬೇಕಾಗಲಿದ್ದು, ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ವಿಷಯದಲ್ಲಿ ಕಠಿಣ ಕ್ರಮಕೈಗೊಳ್ಳುವುದು ಸೇರಿ ಪರಿಣಾಮಕಾರಿ ನಿರ್ವಹಣೆಗೆ ‘ದಶಸೂತ್ರ’ಗಳನ್ನು ರೂಪಿಸಲಾಗಿದೆ ಎಂದು ಆರ್.ಅಶೋಕ್ ವಿವರಿಸಿದರು.
ನಿರ್ವಹಣೆಗೆ ಸೂತ್ರ: ಮುಂದಿನ 15 ದಿನಗಳಲ್ಲಿ ಅತಿ ಹೆಚ್ಚು ಮುನ್ನೆಚ್ಚರಿಕೆ ಕ್ರಮ ವಹಿಸಿ, ಸೋಂಕು ಹರಡುವ ಪ್ರಮಾಣ ನಿಯಂತ್ರಣ. ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಮತ್ತಿತರ ಸರ್ಕಾರಿ ಸಂಸ್ಥೆಗಳಲ್ಲಿ ಇರುವವರಿಗೆ ಅಗತ್ಯ ಮೂಲಸೌಕರ್ಯ. ಬೆಂಗಳೂರು ನಗರದಲ್ಲಿ ಸೋಂಕು ಹೆಚ್ಚಾಗದಂತೆ ನಿರ್ವಹಣೆ. ಪುನರಾರಂಭವಾದ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗದಂತೆ ಸೋಂಕು ನಿಯಂತ್ರಣ. ಕ್ವಾರಂಟೈನ್ ಉಲ್ಲಂಘನೆ ಮತ್ತು ಸೋಂಕಿತರ ಸಂಪರ್ಕ ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸ್ವಯಂ ಸೇವಕರನ್ನೊಳಗೊಂಡ ತಂಡಗಳ ಕಾರ್ಯನಿರ್ವಹಣೆ. ವಾರ್ ರೂಂನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತು ಕ್ಷಣ ಕ್ಷಣದ ಮಾಹಿತಿ. ಸೋಂಕಿತರಿಗೆ ವಿಳಂಬ ವಿಲ್ಲದೆ ಚಿಕಿತ್ಸೆ ಒದಗಿಸಲು ಕ್ರಮ. ಕ್ವಾರಂಟೈನ್ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು. ಪ್ರತಿ ವಾರ್ಡಿನಲ್ಲಿ ಫೀವರ್ ಕ್ಲಿನಿಕ್ ಸ್ಥಾಪನೆ.
28 ಜನರ ವಿರುದ್ಧ ಎಫ್ಐಆರ್: ಕಲಬುರಗಿ ಜಿಲ್ಲೆಗೆ ಕರೊನಾ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದ 28 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆ ದಾಖಲಾಗಿದ್ದ ತಾಲೂಕಿನ ಮಹಿಳೆಯೊಬ್ಬರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದು, ಇದು ಕೋವಿಡ್-19 ಸಂಬಂಧಿತ ಮರಣವಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟ ಪಡಿಸಿದ್ದಾರೆ.
ಬಾಲಕೃಷ್ಣ ಪುತ್ರಿಗೂ ಸೋಂಕು: ರಾಮನಗರ ಜಿಲ್ಲೆ ಮಾಗಡಿಯ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಪುತ್ರಿಗೂ ಕರೊನಾ ದೃಢಪಟ್ಟಿದೆ. ಕಿಮ್ಸ್ ಮೆಡಿಕಲ್ ಕಾಲೇಜಿನ ವೈದ್ಯೆ ಆಗಿರುವ ಪುತ್ರಿಗೆ 2 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ. ಈ ವಿಷಯವನ್ನು ಬಾಲಕೃಷ್ಣ ಅವರೇ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ಮಾಗಡಿಯಲ್ಲಿ ಆಟೋ, ಕಾರು ಚಾಲಕರು ಸೇರಿ 500 ಮಂದಿಗೆ ಬಾಲಕೃಷ್ಣ ಆಹಾರ ಕಿಟ್ ವಿತರಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್ ಸಹ ಭಾಗಿಯಾಗಿದ್ದರು.
ಚನ್ನಗಿರಿ, ಮಾಗಡಿ ಲಾಕ್ಡೌನ್: ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಚನ್ನಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ, ಜೂನ್ 23ರಿಂದ 10 ದಿನ ಪಟ್ಟಣವನ್ನು ಸಂಪೂರ್ಣ ಲಾಕ್ಡೌನ್ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸುರಕ್ಷಿತವಾಗಿದ್ದ ಚನ್ನಗಿರಿ ತಾಲೂಕಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಲಾಕ್ಡೌನ್ ಮಾಡಲು ಜನರೇ ಮುಂದೆ ಬಂದಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 1ರವರೆಗೆ ಲಾಕ್ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದ್ದಾರೆ.
ಠಾಣೆ ಹೊರಗಡೆ ದೂರು ಸ್ವೀಕಾರ: ಪೊಲೀಸರಲ್ಲಿ ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಠಾಣೆಯ ಹೊರಗಡೆಯೇ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪೊಲೀಸರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನ ಮಾಡಲಾಯಿತು. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳನ್ನು ವಾರಕ್ಕೊಮ್ಮೆ ಸ್ಯಾನಿಟೈಸರ್ ಮಾಡಬೇಕು. ಕಂಟೈನ್ಮೆಂಟ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಕೂಡಲೇ ಕರೊನಾ ಪರೀಕ್ಷೆಗೆ ಒಳಪಡಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ಪೊಲೀಸ್ ಸಿಬ್ಬಂದಿಗೆ ಪರೀಕ್ಷೆಗೆ ಒಳಪಡಿಸಲು ಪ್ರತ್ಯೇಕವಾದ ಪರೀಕ್ಷಾ ಕೇಂದ್ರ, ಪಾಸಿಟಿವ್ ಬರುವವರಿಗೆ ಚಿಕಿತ್ಸೆಗೆ ಪ್ರತ್ಯೇಕ ಹಾಸಿಗೆ ಸೌಲಭ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗುವ ಸಿಬ್ಬಂದಿಗೆ ಇಲಾಖೆ ವತಿಯಿಂದಲೇ ಆಹಾರದ ವ್ಯವಸ್ಥೆ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಯಿತು.
ಸಮುದಾಯಕ್ಕೆ ಕರೊನಾ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ. ಪರ್ಯಾಯ ಮಾರುಕಟ್ಟೆಯ ಬಗ್ಗೆಯೂ ಬಿಬಿಎಂಪಿ ತೀರ್ಮಾನ ಮಾಡುತ್ತದೆ. | ಆರ್.ಅಶೋಕ್ ಕಂದಾಯ ಸಚಿವ https://www.vijayavani.net/coronavirus-can-survive-for-20-years-in-minus-20-degrees-celsius-chinese-expert/