

ನವದೆಹಲಿ: 16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜತೆಗೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ( CM Siddaramaiah) ತಿಳಿಸಿದರು.
ದೆಹಲಿಯಲ್ಲಿ 16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 16ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು.
2011-2012ರಲ್ಲಿ ಕರ್ನಾಟಕ ರಾಜ್ಯವು ಜಿಡಿಪಿಗೆ ಶೇ 7ರಷ್ಟು ಕೊಡುಗೆ ನೀಡಿದ್ದರೆ, 2024-25 ರಲ್ಲಿ ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟುಕೊಡುಗೆ ನೀಡುತ್ತಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 5 ರಷ್ಟಿದ್ದೇವೆ. 5 ವಷರ್ಗಳಿಗೊಮ್ಮೆ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಸಂವಿಧಾನದ ಅನುಚ್ಛೇದ 180 ಪ್ರಕಾರ ತೆರಿಗೆ ಹಂಚಿಕೆಯಾಗಬೇಕೆಂದು ಹೇಳಲಾಗಿದ್ದು ಯಾರಿಗೂ ಅನ್ಯಾಯವಾಗಬಾರದೆಂದು ಸ್ಪಷ್ಟಪಡಿಸಿದೆ ಎಂದರು.
15 ನೇ ಹಣಕಾಸಿನ ಆಯೋಗವು ರಾಜ್ಯಕ್ಕೆ 5495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಒದಗಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದಲ್ಲದೇ ಪೆರಿಫೆರಲ್ ರಿಂಗ್ ರಸ್ತೆ ಗೆ 3000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 3000 ಕೋಟಿ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಎರಡೂ ಸೇರಿ 11495 ಕೋಟಿ ರೂ.ಗಳನ್ನು ಒದಗಿಸಬೇಕೆಂದು 15 ನೇ ಹಣಕಾಸಿನ ಆಯೋಗವು ಶಿಫಾರಸ್ಸು ಮಾಡಿತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ನಮ್ಮ ಮನವಿಯಲ್ಲಿ ಕೋರಿರುವಂತೆ ಅನುದಾನವನ್ನು ಒದಗಿಸದೇ ಹೋದರೆ ಬೆಂಗಳೂರು ಅಭಿವೃದ್ಧಿಗೆ 1.ಲಕ್ಷ 15 ಸಾವಿರ ಕೋಟಿಗಳನ್ನು ಒದಗಿಸಬೇಕು ಎಂದು ಕೋರಿದೆ ಎಂದರು.