

ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೆ ಸಂಚಾರಿ ಉಚಿತ ಚಿಕಿತ್ಸಾಲಯ ಹಾಗೂ ಔಷಧಿ ಕಲ್ಪಿಸುವಂತೆ ಬೀದಿಬದಿ ವ್ಯಾಪಾರಿಗಳ ಕುಂದು ಕೊರತೆಗಳ ನಿವಾರಣಾ ಮೇಲ್ಮನವಿ ಪ್ರಾಧಿಕಾರ ಸಮಿತಿ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಬೀದಿಬದಿ ವ್ಯಾಪಾರಿಗಳು ಆರ್ಥಿಕ ದುರ್ಬಲರಾಗಿದ್ದು, ಅವರಲ್ಲಿ ಅಂದೇ ದುಡಿದು ಅಂದೇ ತಿನ್ನುವ ಪರಿಸ್ಥಿತಿ ಇದೆ. ಬಹಳಷ್ಟು ವೃದ್ಧರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮಕ್ಕಳಿಂದ ದೂರವಾಗಿ ರಸ್ತೆಗಳಲ್ಲಿ ಭೀಕ್ಷಾಟನೆ ಬೇಡುತ್ತಿರುವ ಹಲವರು ಗ್ಯಾಂಗ್ರಿನ್ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಆಸ್ಪತ್ರೆಗೆ ಹೋಗಲೂ ಆಗುತ್ತಿಲ್ಲ. ಅಂತಹವರಿಗಾಗಿ ಸಂಚಾರಿ ಉಚಿತ ಚಿಕಿತ್ಸೆ ಹಾಗೂ ಔಷಧಿ ಸೌಲಭ್ಯದ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.
ಹಾಗಾಗಿ ಬೆಂಗಳೂರಿನಲ್ಲಿ ಇಂದಿರಾ ಸಂಚಾರಿ ಚಿಕಿತ್ಸಾಲಯ ಇರುವಂತೆ ರಾಜ್ಯಾದ್ಯಂತ ಇರುವ ಬೀದಿಬದಿ ವ್ಯಾಪಾರಿಗಳಿಗೂ, ಆರ್ಥಿಕ ದುರ್ಬಲ ವರ್ಗದವರಿಗೂ ಸಂಚಾರಿ ಉಚಿತ ಚಿಕಿತ್ಸಾಲಯ ಹಾಗೂ ಔಷಧಿ ಸೌಕರ್ಯ ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದರು.