

ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಧಕ ಬಾಧಕಗಳ ಕುರಿತು ಮೊದಲು ಬಹಿರಂಗ ಚರ್ಚೆ ನಡೆಸಬೇಕು. ಸಭೆಯಲ್ಲಿ ಬರುವ ನಿರ್ಣಯಕ್ಕೆ ಎಲ್ಲರೂ ತಲೆಬಾಗೋಣ. ಸಾರ್ವಜನಿಕ ನ್ಯಾಯದ ಮೇಲೆ ಯೋಜನೆ ಕೈಗೊಳ್ಳಬೇಕೇ ವಿನಃ ಹವಾ ನಿಯಂತ್ರಣ ಕೊಠಡಿಯಲ್ಲಿ ಕೂತು ರೂಪಿಸುವ ಯೋಜನೆಗೆ ಬೆಲೆ ಇಲ್ಲ ಎಂದು ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆ ವಿರೋಧಿಸಿ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ರೈತ ಸಂಘದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದರು.
ಯೋಜನೆ ಕುರಿತು ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭ ಮುಳುಗಡೆ ಸಂತ್ರಸ್ತರಿಗೆ ನೀಡಿದ ಭರವಸೆಯನ್ನೇ ಈತನಕ ಈಡೇರಿಸದ ಸರ್ಕಾರ ಈಗ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ಹಲವು ಕುಟುಂಬಗಳನ್ನು ಮತ್ತೊಮ್ಮೆ ಒಕ್ಕಲೆಬ್ಬಿಸಲು ಮುಂದಾಗಿದೆ. ಮೊದಲೇ ನಿರ್ಣಯ ಕೈಗೊಂಡು, ಯೋಜನೆ ಕಾರ್ಯರೂಪಕ್ಕೆ ತರುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ನೆಪಮಾತ್ರಕ್ಕೆ ಜನಾಭಿಪ್ರಾಯ ಸಂಗ್ರಹಿಸುತ್ತಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥದ್ದಕ್ಕೆ ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದರು.
ಸುರಂಗ ಮಾರ್ಗ ಕೊರೆದಾಗ ಗುಡ್ಡ ಕುಸಿತವಾಗುವ ಸಾಧ್ಯತೆ ಇದೆ. ಸುರಂಗ ಕೊರೆದ ಮಣ್ಣನ್ನು ಹೊರಹಾಕಲು ಗೇರುಸೊಪ್ಪ, ನಗರಸಬಸ್ತಿ ಸೇರಿ ಎಂಟು ಕಡೆ ಜಾಗ ಗುರುತಿಸಿದ್ದಾರೆ. ನದಿಪಾತ್ರದ ಕುಟುಂಬಗಳ ಬದುಕು ನಾಶಮಾಡಲು ಹೊರಟಿರುವ ಯೋಜನೆ ಇದು. ಈ ಯೋಜನೆ ಜತೆಗೆ ವೇದಾವತಿ ನದಿಗೂ ಪಂಪ್ಡ್ ಸ್ಟೋರೇಜ್ ಮಾಡಲು 22 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗುತ್ತಿದೆ. ಪಶ್ಚಿಮಘಟ್ಟದ ಶ್ರೇಣಿಯನ್ನೇ ಬುಡಮೇಲು ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ದೂರಿದರು.
ನ್ಯಾಯಾಂಗದ ಮೊರೆ ನಿಶ್ಚಿತ: ಎರಡು ಸಾವಿರ ಮೆಗಾವಾಟ್ ವಿದ್ಯುತ್ ಒಯ್ಯಲು ಅಪಾರ ಪ್ರಮಾಣದ ಕಾಡು, ಜನವಸತಿ ಪ್ರದೇಶ, ರೈತರ ಜಮೀನು ನಾಶವಾಗುತ್ತದೆ. ಲೈನ್ ಎಳೆಯಲು ಸೆಂಟ್ರಲ್ ಎಲೆಕ್ಟ್ರಿಕಲ್ ಬೋರ್ಡ್ ಈತನಕ ಅನುಮತಿ ಕೊಟ್ಟಿಲ್ಲ. ಕೆಪಿಸಿಎಲ್ ಮತ್ತೊಮ್ಮೆ ಪರವಾನಗಿಗೆ ಕಳಿಸುತ್ತದೆ. ಕೇಂದ್ರದ ಒಪ್ಪಿಗೆ ಸಿಗುವವರೆಗೂ ಸರ್ವೇ ಇನ್ನಿತರೆ ಕಾರ್ಯ ಕೈಗೊಳ್ಳಲು ಸಾಧ್ಯವೇ ಇಲ್ಲ. ನೀವು ಕಾನೂನು ಮೀರಿ ಸರ್ವೇ ಇನ್ನಿತರೆ ಕೈಗೊಂಡರೆ ನಾವು ನ್ಯಾಯಾಲಯಕ್ಕೆ ಹೋಗುವುದು ನಿಶ್ಚಿತ ಎಂದು ಶ್ರೀ ಮಾರುತಿ ಗುರೂಜಿ ಎಚ್ಚರಿಸಿದರು. ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಯೋಜನೆ ರೂಪಿಸಿದರೆ ಹೋರಾಟ ತೀವ್ರಗೊಳುಸುತ್ತೇವೆ. ಯೋಜನೆಗೆ ಅನುಮತಿ ಸಿಕ್ಕಿದೆ ಎಂದು ಜನಪ್ರತಿನಿಧಿಗಳು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಯೋಜನೆಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟದ ಅವಶ್ಯಕತೆ ಇದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ದಿನೇಶ್ ಶಿರವಾಳ, ತೀ.ನ.ಶ್ರೀನಿವಾಶ್, ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚದ್ರ ಭಟ್, ಮಲ್ಲಿಕಾರ್ಜುನ ಹಕ್ರೆ, ಅಖಿಲೇಶ್ ಚಿಪ್ಳಿ, ಹಿತಕರ ಜೈನ್, ರಮೇಶ್ ಕೆಳದಿ, ಭದ್ರೇಶ್ ಇತರರಿದ್ದರು.