ಭದ್ರಾ ನಾಲೆಗೆ ನೀರು ನಿಲ್ಲಿಸಿ

ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ತಡೆ
Blockade of the Shivamogga-Chitradurga National Highway
ಭದ್ರಾ ಮೆಲ್ದಂಡೆ ನಾಲೆಗೆ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಪ್ರಮುಖರು ಅರಹತೋಳಲು ಕೈಮರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಶಾರದಾ ಪೂರ‌್ಯಾನಾಯ್ಕ, ಯಶ್ವಂತರಾವ್ ಘೋರ್ಪಡೆ, ವೀರೇಶ್, ಹಿರಣ್ಣಯ್ಯ ಇತರರಿದ್ದರು.
Published on: 

ಹೊಳೆಹೊನ್ನೂರು: ಭದ್ರಾ ಮೇಲ್ದಂಡೆ ನಾಲೆಗೆ ನೀರು ಹರಿಸುತ್ತಿರುವ ಸರ್ಕಾರದ ನಡೆ ವಿರೋಧಿಸಿ ಸಮೀಪದ ಅರಹತೋಳಲು ಕೈಮರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.

ಮೇಲ್ದಂಡೆ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಈಗಾಗಲೇ 3 ಟಿಎಂಸಿ ನೀರು ಪೋಲು ಮಾಡಲಾಗಿದೆ. ಪುನಃ 1 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದೆ. ಪ್ರಸ್ತುತ 55 ಟಿಎಂಸಿ ನೀರಿದ್ದು, ನೀರಾವರಿ ಉದ್ದೇಶಕ್ಕೆ ಬಳಕೆಗೆ ಲಭ್ಯವಿರುವ 29 ಟಿಎಂಸಿಯಲ್ಲಿ 103 ದಿನಗಳ ಕಾಲ ಎಡ ಹಾಗೂ ಬಲ ದಂಡೆಗಳಿಗೆ ನೀರು ಸಾಲುವುದಿಲ್ಲ. ಮುಂದಿನ 5-6 ತಿಂಗಳು ಇದೇ ನೀರನ್ನು ನಿಯಮಿತವಾಗಿ ಬಳಸಿಕೊಂಡರೆ ಮಾತ್ರ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ರೈತ ಮುಖಂಡ ಯಶ್ವಂತರಾವ್ ಘೋರ್ಪಡೆ ಮನವರಿಕೆ ಮಾಡಿಕೊಟ್ಟರು.

ಜಲಾಶಯದಲ್ಲೇ ನೀರಿಲ್ಲದಿರುವಾಗ ಮೇಲ್ದಂಡೆ ನಾಲೆಗೆ ನೀರು ಹರಿಸುವುದು ಯಾವ ನ್ಯಾಯ? ಇಂತಹ ಸರ್ಕಾರಗಳಿಂದ ಕೃಷಿಕರ ಹಿತರಕ್ಷಣೆ ಸಾಧ್ಯವಿಲ್ಲ. ರೈತ ವಿರೋಧಿ ಸರ್ಕಾರಗಳಿಗೆ ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ಪಕ್ಕದ ಚಿತ್ರದುರ್ಗಕ್ಕೆ ನೀರು ನೀಡುವುದಕ್ಕೆ ನಮ್ಮ ಭಾಗದ ರೈತರ ತಕರಾರು ಇಲ್ಲ. ತುಂಗಾ ಯೋಜನೆ ಮುಕ್ತಾಯದ ಬಳಿಕ ನೀರು ನೀಡಲಿ ಎಂದರು.

ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ರಾಜ್ಯ ಸರ್ಕಾರ ಹಿರಿಯೂರಿನ ಉಪ ಚುನಾವಣೆ ಮುಂದಿಟ್ಟುಕೊಂಡು ಆ ಭಾಗದ ರೈತರ ಮತ ಸೆಳೆಯಲು ಭದ್ರಾ ಜಲಾಶಯದ ನೀರನ್ನು ಕದಿಯುತ್ತಿದೆ. ಮೇಲ್ದಂಡೆ ನಾಲೆಗೆ ನೀರು ಹರಿಸದಂತೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜಲಾಶಯದಲ್ಲಿರುವ ನೀರು ಈ ಭಾಗಕ್ಕೇ ಸಾಲುತ್ತಿಲ್ಲ. ಸರ್ಕಾರ ಕೂಡಲೇ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಹಿರಣ್ಣಯ್ಯ, ರಾಮಚಂದ್ರ ರಾವ್, ಮಂಜುನಾಥ್, ಬಸವರಾಜ್, ಪಾಲಾಕ್ಷಪ್ಪ, ಸತೀಶ್, ನಂಜುಂಡಸ್ವಾಮಿ, ಈಶ್ವರ ರಾವ್, ಕಿರಣ್, ಕುಮಾರ್, ಕರಿಬಸಪ್ಪ, ಚಂದ್ರಶೇಖರ್ ಇತರರಿದ್ದರು.