

ಬೆಂಗಳೂರು: ರಾಷ್ಟ್ರ ಲಾಂಛನ, ಧ್ವಜ ಮತ್ತು ವಿವಿಧ ರಾಷ್ಟ್ರೀಯ ಚಿಹ್ನೆಗಳ ದುರ್ಬಳಕೆ ಮತ್ತು ಅನಧಿಕೃತ ಬಳಕೆ ಮಾಡಿದರೆ ಇನ್ಮುಂದೆ ದಂಡ ಬೀಳಲಿದೆ. ಚಿಹ್ನೆ, ಧ್ವಜ, ಹೆಸರು, ಲೋಗೋ, ಲಾಂಛನ ಮತ್ತು ಮೊಹರು ದುರ್ಬಳಕೆ, ಅನಧಿಕೃತ ಬಳಕೆಯನ್ನು ತಡೆಯುವ ಸಲುವಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳನ್ನು ನೀಡಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಿದೆ. ಈ ಪ್ರಕಾರ ಎಲ್ಲ ಇಲಾಖೆಗಳು, ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿವಿಗಳು, ಆಯೋಗ ಮತ್ತು ಇತ್ಯಾದಿಗಳು ಈ ಆದೇಶವನ್ನು ಪಾಲನೆ ಮಾಡಬೇಕು. ಅನಧಿಕೃತವಾಗಿ ಬಳಸುತ್ತಿರುವ ರಾಷ್ಟ್ರಧ್ವಜ, ಲಾಂಛನ ಮತ್ತು ಹೆಸರು, ಲೋಗೋ, ಮೊಹರು, ಸ್ಟಿಕರ್‌ಗಳನ್ನು 4 ವಾರಗಳ ಒಳಗಾಗಿ ತೆರವು ಮಾಡಬೇಕು.
ಕಾಯ್ದೆ ಉಲ್ಲಂಘನೆ ಮಾಡುವರ ವಿರುದ್ಧ ದಂಡ ವಿಧಿಸುವುದು ಮತ್ತು ಚಾಲನ ಪರವಾನಗಿ ರದ್ದುಪಡಿಸುವ ನಿಯಮ ಅಳವಡಿಸಿಕೊಳ್ಳಬೇಕು ಮತ್ತು ಸಂಚಾರ ಪೊಲೀಸರು ಇಂತಹ ಪ್ರಕರಣಗಳ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.