ಪರ್ಮಿಟ್ ಇಲ್ಲದ ಸರ್ಕಾರಿ ಬಸ್ ಸಂಚಾರ ನಿಲ್ಲಿಸಿ

sgr bus (1)
ಪರ್ಮಿಟ್ ಇಲ್ಲದ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಗರ ಪ್ರಾಂತ್ಯ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಎಸಿ ಕಚೇರಿಗೆ ಮನವಿ ಸಲ್ಲಿಸಿದರು. ಗೋಪಾಲ ಶೆಟ್ಟಿ, ಟಿ.ಡಿ.ಮೇಘರಾಜ್, ದಿನೇಶ್, ಕುಮಾರ್, ಸುಭಾಷ್ ನಾಯಕ್ ಇತರರಿದ್ದರು.
Published on

ಸಾಗರ: ಪರವಾನಗಿ ಇಲ್ಲದೆ ಸಂಚರಿಸುತ್ತಿರುವ ಸರ್ಕಾರಿ ಬಸ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಾಂತ್ಯ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರು, ನೌಕರರ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದ್ದಾರೆ. ಖಾಸಗಿ ಬಸ್‌ಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಕರೊನಾ ಸಂದರ್ಭದಲ್ಲಿ ಬೀದಿಗೆ ಬಂದಿದ್ದರು. ಈಗ ಇಂತಹ ದಬ್ಬಾಳಿಕೆ ನಡೆಸುತ್ತಿರುವುದರಿಂದ ಖಾಸಗಿ ಬಸ್‌ನವರು ಬದುಕಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ತಕ್ಷಣ ಸಭೆ ಕರೆದು ಅನಧಿಕೃತವಾಗಿ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಿರಂತರ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಎಚ್ಚರಿಸಿದರು.

ಸಂಘದ ಅಧ್ಯಕ್ಷ ನಾಗರಾಜ ಗುಡ್ಡೆಮನೆ ಮಾತನಾಡಿ, ಕಾನೂನು ಗೊತ್ತಿಲ್ಲದ ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಖಾಸಗಿ ಬಸ್‌ಗಳು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ನಷ್ಟವಾದರೂ ಗ್ರಾಮಾಂತರ ಪ್ರದೇಶಗಳಿಗೆ ಬಿಟ್ಟಿದ್ದೇವೆ. ಇದೀಗ ಸರ್ಕಾರಿ ಬಸ್‌ಗಳನ್ನು ಪರವಾನಗಿ ಇಲ್ಲದ ಮಾರ್ಗಗಳಲ್ಲಿ ಬಿಟ್ಟು ಖಾಸಗಿ ಬಸ್ ಸಂಚಾರ ನಿಲ್ಲಿಸುವ ಹುನ್ನಾರ ನಡೆಸುತ್ತಿದೆ. ಶಾಸಕರು ತಕ್ಷಣ ಮಧ್ಯಪ್ರವೇಶ ಮಾಡಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಡಿಸಿ ಕಚೇರಿ ಎದುರು ಖಾಸಗಿ ಬಸ್ ಅವಲಂಬಿತರು ಕುಟುಂಬ ಸಹಿತ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಗಜಾನನ ಬಸ್ ನೌಕರರ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಖಾಸಗಿ ಬಸ್ ಮಾಲೀಕರು ಮನವಿ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಅನಧಿಕೃತವಾಗಿ ಓಡಿಸುತ್ತಿರುವ ಸರ್ಕಾರಿ ಬಸ್‌ಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಕುಮಾರ್, ಸುಭಾಷ್ ನಾಯ್ಕ, ಜಯಂತ್ ಬೇಸೂರು, ಡಾಕಪ್ಪ, ಪ್ರಕಾಶ್, ದಾನಪ್ಪ, ರಾಘವೇಂದ್ರ ಪೈ, ತಿಮ್ಮಪ್ಪ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net