ರೈತರಿಗೆ ನೋಟಿಸ್ ನೀಡುವುದನ್ನು ನಿಲ್ಲಿಸಲಿ

sgr farmer
ಅರಣ್ಯ ಇಲಾಖೆ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿಯ ತೀ.ನ.ಶ್ರೀನಿವಾಸ್, ಸುಂದರ ಸಿಂಗ್, ಜಯಂತ್, ಅಶೋಕ್, ದಿನೇಶ್ ಮತ್ತಿತರರು ಸಾಗರದಲ್ಲಿ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
Published on

ಸಾಗರ: ಜಿಲ್ಲೆಯ ಭೂರಹಿತ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಅರಣ್ಯ ಇಲಾಖೆ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆಯದು ಸಂಪೂರ್ಣ ರೈತವಿರೋಧಿ ನಡೆ. ಮುಳುಗಡೆ ಸಂತ್ರಸ್ತರು ಯಾರೂ ಇಲ್ಲ ಎಂದು ವರದಿ ನೀಡಿ ಅನ್ಯಾಯ ಮಾಡಿದೆ. ಮೂರು ಎಕರೆಯೊಳಗೆ ಜಮೀನು ಹೊಂದಿರುವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಭರವಸೆ ನೀಡಿದ್ದರು. ಆದರೆ ಅರ್ಧ ಎಕರೆ ಜಮೀನು ಹೊಂದಿದವರಿಗೂ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರೈತರಿಗೆ ನೋಟಿಸ್ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾನು, ಜಾಡಿ, ಹುಲುಬನಿ, ಸೊಪ್ಪಿನಬೆಟ್ಟ ಇರುವವರಿಗೆ ನೋಟಿಸ್ ನೀಡಲಾಗುತ್ತಿದೆ. ನೈಜ ಒತ್ತುವರಿ ಪ್ರಕರಣದಲ್ಲಿ ಮಾತ್ರ ನೋಟಿಸ್ ನೀಡಿ ಎಂದು ಸುಪ್ರೀಂ ಕೋಟ್ ಹೇಳಿದ್ದರೂ ಅರಣ್ಯ ಇಲಾಖೆ ಗಮನ ಹರಿಸುತ್ತಿಲ್ಲ. ದನಗಳಿಗೆ ಮುಫತ್ತು, ಹುಲುಬನಿ ಎಲ್ಲವನ್ನೂ ಅರಣ್ಯ ಎಂದು ನಮೂದಿಸಲಾಗಿದೆ. ಕೆಪಿಸಿ ಭೂಮಿಯನ್ನು ಯಾರೂ ಉಳುಮೆ ಮಾಡಿದ್ದಾರೋ ಅವರಿಗೇ ಮಂಜೂರು ಮಾಡಬೇಕು. ತಕ್ಷಣ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ನಮ್ಮ ಸಮಿತಿಯಿಂದ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್, ಸುಂದರ ಸಿಂಗ್, ಜಯಂತ್, ಅಶೋಕ್, ದಿನೇಶ್, ರವಿಚಂದ್ರ, ವೀರೇಂದ್ರ, ಮಹೇಶ್, ಮಂಜಪ್ಪ, ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net