ಜುಲೈ 30ರವರೆಗೆ ಅತಿಸಾರ ನಿಲ್ಲಿಸಿ ಅಭಿಯಾನ

ceo
ಅತಿಸಾರ ನಿಲ್ಲಿಸಿ ಅಭಿಯಾನದ ಭಿತ್ತಿಪತ್ರವನ್ನು ಜಿಪಂ ಸಿಇಒ ಎನ್.ಹೇಮಂತ್ ಬಿಡುಗಡೆ ಮಾಡಿದರು. ಡಾ.ನಟರಾಜ್, ಡಾ.ನಾಗರಾಜ ನಾಯ್ಕ, ಡಾ.ವೆಂಕಟೇಶ್, ಡಾ.ಮಲ್ಲಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿಸಾರದಿಂದ ಉಂಟಾಗುವ ಮಕ್ಕಳ ಸಾವುಗಳನ್ನು ಶೂನ್ಯಕ್ಕೆ ಇಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವಂತೆ ಮಾಡುವ ಸದುದ್ದೇಶದೊಂದಿಗೆ ಜೂನ್16ರಿಂದ ಜುಲೈ 31ರವರೆಗೆ ಜಿಲ್ಲೆಯಾದ್ಯಂತ ಅತಿಸಾರ ನಿಲ್ಲಿಸಿ ಅಭಿಯಾನ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.

ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಭಿತ್ತಿಪತ್ರ ಬಿಡುಗಡೆ ಮಾಡಿದ ಅವರು, ಎಲ್ಲ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು ಜಿಲ್ಲೆಯ ಎಲ್ಲ ಗ್ರಾಮಗಳ ಮನೆಗಳಿಗೆ ತೆರಳಿ ಓಆರ್‌ಎಸ್ ವಿತರಣೆ ಮತ್ತು ತಯಾರಿಕೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಮಾಭಿವೃದ್ಧಿ ಪ್ರತಿನಿಧಿಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 5 ವರ್ಷದೊಳಗಿನ 1,06,070 ಮಕ್ಕಳ ದಾಖಲಾತಿಯಾಗಿದ್ದು ಎಲ್ಲ ಮಕ್ಕಳಿಗೆ ತಪ್ಪದೆ ಓಆರ್‌ಎಸ್ ಪ್ಯಾಕೆಟ್ ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸಿ ಅತಿಸಾರ ಭೇದಿ, ಕೈ ತೊಳೆಯುವ ವಿಧಾನ, ಶುದ್ಧ ಕುಡಿಯುವ ನೀರು ಉಪಯೋಗಿಸುವ ಬಗ್ಗೆ ಹಾಗೂ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡುವಂತೆ ಕೈತೊಳೆಯುವ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸಲು ಸೂಚಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸುವಂತೆಯೂ ಸೂಚಿಸಲಾಗಿದೆ ಎಂದು ನುಡಿದರು.

ಡಿಎಚ್‌ಒ ಡಾ.ನಟರಾಜ್, ಆರ್‌ಸಿಎಚ್‌ಒ ಡಾ.ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ತಾಲೂಕು ಆರೋಗ್ಯಧಿಕಾರಿ ಡಾ.ಚಂದ್ರಶೇಖರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net