ಷೇರು ಪೇಟೆಯಲ್ಲಿ ಗೂಳಿಯ ಅಬ್ಬರ: ಜೀವಮಾನದ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಸೂಚ್ಯಂಕ

stock-market
Published on

ಮುಂಬೈ: ಗುರುವಾರ ಷೇರು ಪೇಟೆಯಲ್ಲಿ ಗೂಳಿ ಅಬ್ಬರಿಸಿತು. ಈ ಹಿನ್ನೆಲೆಯಲ್ಲಿ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಗುರುವಾರ ದಾಖಲೆಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು.

ದೃಢವಾದ ಕಾರ್ಪೊರೇಟ್ ಕಾರ್ಯಕ್ಷಮತೆಯ ನಿರೀಕ್ಷೆಗಳ ನಡುವೆ ಐಟಿ, ಗ್ರಾಹಕ ಬೆಲೆಬಾಳುವ ವಸ್ತುಗಳು ಮತ್ತು ಹಣಕಾಸು ಷೇರುಗಳ ಖರೀದಿ ಈ ಏರಿಕೆಗೆ ಕಾರಣವಾಯಿತು. ಇದಲ್ಲದೆ, ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಬಡ್ಡಿ ದರ ನಿರ್ಧಾರದಲ್ಲಿ ಯಥಾಸ್ಥಿತಿಯನ್ನು ನಿರೀಕ್ಷಿಸುವ ಮೂಲಕ ಹೂಡಿಕೆದಾರರು ಆಯ್ದ ಬ್ಯಾಂಕಿಂಗ್ ಷೇರುಗಳನ್ನು ಖರೀಸಿದರು ಎಂದು ವಿಶ್ಲೇಷಕರು ಹೇಳಿದ್ದಾರೆ.

30-ಷೇರುಗಳ ಬಿಎಸ್‌ಇ ಸೂಚ್ಯಂಕವು 350.81 ಅಂಕಗಳು ಅಥವಾ ಶೇಕಡಾ 0.47 ರಷ್ಟು ಏರಿಕೆಯಾಗಿ ಜೀವಿತಾವಧಿಯ ಗರಿಷ್ಠ ಮಟ್ಟವಾದ 74,227.63 ಅಂಕಗಳಿಗೆ ತಲುಪಿತು. ಇಂಟ್ರಾ ಡೇ ವಹಿವಾಟಿನಲ್ಲಿ ಈ ಸೂಚ್ಯಂಕವು ಗರಿಷ್ಠ 74,501.73 ಮತ್ತು ಕನಿಷ್ಠ 73,485.12 ನಡುವೆ ಓಲಾಡಿತು.

ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ ಕೂಡ 80 ಅಂಕಗಳನ್ನು ಅಥವಾ ಶೇಕಡಾ 0.36 ರಷ್ಟು ಗಳಿಸಿ 22,514.65 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಈ ಸೂಚ್ಯಂಕದಲ್ಲಿನ 50-ಷೇರುಗಳ ಪೈಕಿ 31 ಷೇರುಗಳು ಲಾಭದಲ್ಲಿ ಮುನ್ನಡೆದವು.

ಹಿಂದಿನ ಎರಡು ವಹಿವಾಟು ದಿನಗಳಲ್ಲಿ ಈ ಎರಡೂ ಸೂಚ್ಯಂಕಗಳು ಕುಸಿತ ಕಂಡಿದ್ದವು. ಮಾರ್ಚ್ 7 ರಂದು, ಬಿಎಸ್​ಇ ಸೂಚ್ಯಂಕವು ತನ್ನ ಹಿಂದಿನ ಗರಿಷ್ಠ ಮಟ್ಟವಾದ 74,119.39 ಅಂಕಗಳನ್ನು ದಾಖಲಿಸಿತ್ತು. ನಿಫ್ಟಿ ತನ್ನ ಹಿಂದಿನ ಗರಿಷ್ಠ ಮಟ್ಟವಾದ 22,493.55 ಅಂಕಗಳನ್ನು ತಲುಪಿತ್ತು.

ಬಿಎಸ್​ಇ ಸೂಚ್ಯಂಕದಲ್ಲಿನ 20 ಸ್ಟಾಕ್‌ಗಳು ಲಾಭ ಗಳಿಸಿದವು. HDFC ಬ್ಯಾಂಕ್, ಟೈಟಾನ್, ಟೆಕ್ ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್ ಕಂಪನಿಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಟಿಸಿಎಸ್, ಮಾರುತಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಕೂಡ ಏರಿಕೆ ಕಂಡವು.

ಇದಕ್ಕೆ ವ್ಯತಿರಿಕ್ತವಾಗಿ, ಎಸ್‌ಬಿಐ, ಭಾರ್ತಿ ಏರ್‌ಟೆಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್‌ಗ್ರಿಡ್, ಐಟಿಸಿ ಮತ್ತು ರಿಲಯನ್ಸ್ ಷೇರುಗಳು ನಷ್ಟ ಅನುಭವಿಸಿದವು.

ಬಿಎಸ್‌ಇ ಲಾರ್ಜ್‌ಕ್ಯಾಪ್ ಸೂಚ್ಯಂಕ ಶೇಕಡಾ 0.34, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.54 ರಷ್ಟು ಏರಿತು. ಆದರೆ, ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.11 ರಷ್ಟು ಕುಸಿತ ದಾಖಲಿಸಿತು.

ಏಷ್ಯಾದ ಇತರ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಟೋಕಿಯೊ ಲಾಭ ಗಳಿಸಿದವು. ಹಾಂಗ್ ಕಾಂಗ್ ಮತ್ತು ಶಾಂಘೈ ರಜೆಗಾಗಿ ಮುಚ್ಚಿದ್ದವು. ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳಲ್ಲಿ ಮಿಶ್ರ ನೋಟ ಇತ್ತು.


ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 2,213.56 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

ಬುಧವಾರ, ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 27.09 ಅಂಕಗಳು ಅಥವಾ ಶೇಕಡಾ 0.04 ಕುಸಿದು 73,876.82 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 18.65 ಅಂಕಗಳು ಅಥವಾ ಶೇ. 0.08 ರಷ್ಟು ಕುಸಿದು 22,434.65 ಕ್ಕೆ ತಲುಪಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net