

ಮುಂಬೈ: ಕಳೆದ ಮೂರು ದಿನಗಳಿಂದ ಇಳಿಮುಖವಾಗಿದ್ದ ಭಾರತೀಯ ಷೇರುಪೇಟೆ ಬುಧವಾರ ಚೇತರಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಕೆ ಪ್ರವೃತ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ನಂತಹ ಬ್ಲ್ಯೂಚಿಪ್ ಕಂಪನಿಗಳ ಷೇರು ಖರೀದಿ ಭರಾಟೆ ಇದಕ್ಕೆ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ನಿರೀಕ್ಷೆಗಿಂತ ಉತ್ತಮವೆನ್ನಿಸುವ ರೀತಿಯಲ್ಲಿ ಹೊರಹೊಮ್ಮಿದ ಅಮೆರಿಕದ ಉದ್ಯೋಗ ಮಾರುಕಟ್ಟೆ ಮಾಹಿತಿ, ಅಮೆರಿಕ ಮತ್ತು ಚೀನಾ ಅಧ್ಯಕ್ಷರ ನಡುವಿನ ಮಾತುಕತೆ ಕುರಿತು ಉಂಟಾದ ಆಶಾವಾದ ಕೂಡ ಭಾರತೀಯ ಷೇರುಪೇಟೆಯ ಚೇತರಿಕೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದಿನದ ಒಂದು ಹಂತದಲ್ಲಿ 349 ಅಂಕ ಏರಿಕೆಯಾಗಿ 81,087ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 260 ಅಂಕ ಏರಿಕೆ ದಾಖಲಿಸಿ 80,998ಕ್ಕೆ ಸ್ಥಿರವಾಯಿತು. ನಿಫ್ಟಿ ಕೂಡ 77 ಅಂಕ ಏರಿಕೆಯಾಗಿ 24,620ಕ್ಕೆ ಸ್ಥಿರಗೊಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 2,853 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.