

ಮುಂಬೈ: ಹಣಕಾಸು ವಲಯದ ಮತ್ತು ಲೋಹದ ಷೇರುಗಳ ಕೊನೇ ಗಳಿಗೆ ಮಾರಾಟದಿಂದಾಗಿ ಭಾರತೀಯ ಷೇರುಪೇಟೆ ಗುರುವಾರ ಆರಂಭಿಕ ಹಂತದ ಲಾಭವನ್ನು ಕಳೆದುಕೊಂಡು ದಿನದ ಕೊನೆಯಲ್ಲಿ ಇಳಿಮುಖವಾಗಿ ಮುಕ್ತಾಯವಾಯಿತು. ದಿನದ ವಹಿವಾಟಿನ ಮಧ್ಯೆ 440.4 ಅಂಕ ಏರಿಕೆಯಾಗಿ 83, 850.09ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 170.22 ಅಂಕ ಕುಸಿದು 83,239.47ಕ್ಕೆ ಸ್ಥಿರಗೊಂಡಿತು. ನಿಫ್ಟಿ 48.10 ಅಂಕ ಕುಸಿದು 25,405.30ಕ್ಕೆ ಸ್ಥಿರವಾಯಿತು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 1.03ರಷ್ಟು ಕುಸಿದು ಬ್ಯಾರೆಲ್ಗೆ 68.40 ಡಾಲರ್ಗೆ ಮುಟ್ಟಿತು.
ಚಿನ್ನದ ಬೆಲೆ 450 ರೂ. ಏರಿಕೆ
ದಾಸ್ತಾನುದಾರರಿಂದ ನಿರಂತರ ಖರೀದಿ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ 450 ರೂ. ಏರಿಕೆಯಾಗಿದೆ. ಬುಧವಾರ 10 ಗ್ರಾಂಗೆ 99,170 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಗುರುವಾರ 99,620 ರೂ.ಗೆ ತಲುಪಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 400 ರೂ. ಏರಿಕೆಯಾಗಿದ್ದು 99,000 ರೂ.ಗೆ ತಲುಪಿದೆ. ಇದು ಬುಧವಾರ 98,600 ರೂ. ಇತ್ತು. ಬೆಳ್ಳಿಯ ಬೆಲೆ ಗುರುವಾರ 1,000 ರೂ. ಏರಿಕೆಯಾಗಿದ್ದು ಕೆಜಿಗೆ 1,05,800 ರೂ.ಗೆ ತಲುಪಿದೆ. ಬುಧವಾರ ಇದು 1,04,800 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.