ರಾಜ್ಯದಲ್ಲಿ ಇನ್ನೂ 4 ದಿನ ಮಳೆ: ಬೆಚ್ಚಿದ ಹಳೇ ಮೈಸೂರು ಬೆಳೆಹಾನಿ, ಮನೆಗಳ ಕುಸಿತ

Rain
Published on

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಭರ್ಜರಿ ಮಳೆ ಮುಂದುವರಿದಿದ್ದು, ಬುಧವಾರ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ತತ್ತರಿಸಿವೆ. ಮೇ 4ರವರೆಗೆ ಇದೇ ಸ್ಥಿತಿ ಮುಂದುವರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಬುಧವಾರ ಬೆಳಗಿನ ಜಾವ ಸುರಿದ ಭರ್ಜರಿ ಮಳೆಗೆ ಹಲವೆಡೆ ಭೂಕುಸಿತವಾಗಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದರೆ, ಕೆಲವೆಡೆ ಕಾಂಪೌಂಡ್ ಕುಸಿದು, ಅನೇಕ ಕಡೆ ಮರಗಳು ಉರುಳಿ ವಾಹನಗಳು ಜಖಂಗೊಂಡವು.

ಮೈಸೂರು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ, ಬುಧವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಜಿಲ್ಲೆಯ ಸರಗೂರು ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ-ಕಟ್ಟೆ ಕೋಡಿ ಹರಿದು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಇದಲ್ಲದೆ ಮನೆಗಳಿಗೆ ನೀರು ನುಗ್ಗಿ, ಗೋಡೆ ಕುಸಿದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೊಡಗಿನ ಗೋಣಿಕೊಪ್ಪ ಸಮೀಪದ ಕೋಣಗೇರಿ ಗ್ರಾಮದಲ್ಲಿ ಬಾಳೆ ಗಿಡಗಳು ಗಾಳಿ, ಮಳೆಗೆ ಸಿಲá-ಕಿ ನೆಲ ಕಚ್ಚಿವೆ. ಮಂಡ್ಯ ನಗರ, ಮದ್ದೂರು, ಮಳವಳ್ಳಿ, ನಾಗಮಂಗಲ ತಾಲೂಕಿನ ವಿವಿಧೆಡೆ ಮಳೆಯಾಯಿತು. ಜಿಲ್ಲೆಯಲ್ಲಿ 14.1 ಮಿ.ಮೀ ಮಳೆಯಾಗಿದೆ.

ಜೋರು ಮಳೆಯಿಂದಾಗಿ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮನೆಯ ಮಣ್ಣಿನ ಗೋಡೆ ಕುಸಿದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಸೇರಿದಂತೆ ವಿವಿಧೆಡೆ ಮಂಗಳವಾರ ರಾತ್ರಿ ಬಿದ್ದ ಗಾಳಿ ಮಳೆಗೆ ಬಾಳೆಗಿಡಗಳು ನೆಲಕಚ್ಚಿದರೆ, ಮನೆಯ ಛಾವಣಿಗಳು ಹಾರಿಹೋಗಿವೆ.

ದ್ರಾಕ್ಷಿ, ಮಾವು ಹಾನಿ: ಬೆಂ.ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಬುಧವಾರ ಮುಂಜಾನೆ ಸುರಿದ ಧಾರಾಕಾರ ಮಳೆಗೆ 8.1 ಹೆಕ್ಟೇರ್​ನಷ್ಟು ದ್ರಾಕ್ಷಿ, ಮಾವು ಮತ್ತಿತರ ತೋಟಗಾರಿಗೆ ಬೆಳೆಗೆ ಹಾನಿಯಾಗಿದೆ. ದೇವನಹಳ್ಳಿ ತಾಲೂಕು ವೆಂಕಟಗಿರಿ ಗ್ರಾಮದ ರೈತ ದೇವರಾಜು ಎಂಬುವವರು 1.10 ಎಕರೆಯಲ್ಲಿ ಬೆಳೆದಿದ್ದ ದಿಲ್​ಕುಶ್ ತಳಿಯ ದ್ರಾಕ್ಷಿ ಫಸಲು ಸಂಪೂರ್ಣ ನೆಲಕಚ್ಚಿದೆ. ಇದರಿಂದ ಮೂರು ವರ್ಷದಿಂದ ಶ್ರಮಪಟ್ಟಿದ್ದ ಬೆಳೆಗಾರನಿಗೆ ನಷ್ಟ ಉಂಟಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ತಾತ್ಕಾಲಿಕ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಾಸ್ತಾನು ಮಾಡಲಾಗಿದ್ದ 45 ರೈತರ ಅಪಾರ ಪ್ರಮಾಣದ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ ಮಣ್ಣು ಪಾಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾವು, ಕೋಲಾರ, ಮುಳಬಾಗಿಲು, ಬಂಗಾರಪೇಟೆ ಭಾಗದಲ್ಲಿ ಟೊಮ್ಯಾಟೊ, ಕ್ಯಾಪ್ಸಿಕಂ, ಪಪ್ಪಾಯ ಇನ್ನಿತರ ಬೆಳೆಗಳು ಹಾನಿಯಾಗಿದ್ದು, ಬೆಳೆ ನಷ್ಟದ ಬಗ್ಗೆ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಆರಂಭಗೊಂಡಿದೆ.

ಜೂನ್, ಜುಲೈನಲ್ಲಿ ಕಡಿಮೆ ಮಳೆ

ಭಾರತದಲ್ಲಿ ಈ ಬಾರಿ ಸಾಮಾನ್ಯ ಮುಂಗಾರು ಮಳೆಯಾಗುವ ಮುನ್ಸೂಚನೆ ಇದ್ದರೂ ಜೂನ್​ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ, ಜುಲೈನಲ್ಲಿ ದೀರ್ಘಕಾಲ ಶುಷ್ಕ ವಾತಾವರಣ ಮತ್ತು ಸೆಪ್ಟೆಂಬರ್

ನಲ್ಲಿ ಕಳೆದ ವರ್ಷದ ಮಾದರಿಯಂತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಕರಾವಳಿ ಪ್ರದೇಶವಾದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಿಜೋರಾಂನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಭಾಗದಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ನಿರೀಕ್ಷೆ ಇದೆ. ದೇಶದ ಬಹುತೇಕ ಭಾಗದಲ್ಲಿ ಸಾಮಾನ್ಯ ಅಂದರೆ ಶೇ.40 ರಿಂದ 50 ಮಳೆಯಾಗಲಿದ್ದು, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದ ಪಶ್ಚಿಮ ಭಾಗ ಹಾಗೂ ಮಹಾರಾಷ್ಟ್ರದ ವಾಯವ್ಯ ಭಾಗದಲ್ಲಿ ಶೇ. 50 ರಿಂದ 60ರಷ್ಟು ಮಳೆಯಾಗುವ ಸೂಚನೆ ಇದೆ. ಜೂನ್ ಮತ್ತು ಜುಲೈನಲ್ಲಿ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದ ಕೆಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದ್ದು, ಮಳೆಯಾಶ್ರಿತ ಬೆಳೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದಾಗ್ಯೂ ಮಳೆಯ ಪ್ರಾದೇಶಿಕ ಹಂಚಿಕೆ ಬಗ್ಗೆ ಐಎಂಡಿ ಯಾವುದೇ ಮಾಹಿತಿ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net