ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ

2blrp1
ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವ ಸಿದ್ಧತೆಯನ್ನು ಜಿಲ್ಲಾಧಿಕಾರಿ ಸತ್ಯಭಾಮಾ ಮಂಗಳವಾರ ರಾತ್ರಿ ಪರಿಶೀಲಿಸಿದರು. ಅಶೋಕ್, ಶಾಂತಲಾ ಇತರರಿದ್ದರು.
Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಬುಧವಾರದಿಂದ 10 ದಿನಗಳವರೆಗೆ ನಡೆಯಲಿದ್ದು, ಭಕ್ತರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.

ಪಟ್ಣದ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಮಂಗಳವಾರ ರಾತ್ರಿ ದಿಢೀರ್ ಭೇಟಿ ನೀಡಿ ರಥೋತ್ಸವದ ಸಿದ್ಧತೆ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು, ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿರುವ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಸಂಪ್ರದಾಯದಂತೆ ವಿಧಿ ವಿಧಾನಗಳು ಜರುಗಲಿವೆ. ಇಲ್ಲಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಎರಡು ದಿನ ನಡೆಯುವ ರಥೋತ್ಸವಕ್ಕೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಬೇಲೂರಿಗೆ ಆಗಮಿಸುವುದರಿಂದ ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಮತ್ತು ದೇವಾಲಯದ ಆಡಳಿತಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಸ್ಥಳಿಯವಾಗಿ ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ವಿಶೇಷವಾಗಿ ಮೆರುಗು ನೀಡುವುದಕ್ಕಾಗಿ ಪಟ್ಟಣದ ತುಂಬೆಲ್ಲ ವಿದ್ಯುತ್ ದೀಪಾಲಂಕಾರ ಮಾಡುವುದಕ್ಕೆ ಮುಂದಾಗಿದ್ದು, ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಎಲ್ಲೂ ಲೋಪವಾಗದಂತೆ ದೀಪಾಲಂಕಾರ ಮಾಡಬೇಕೆಂದು ಎಚ್ಚರಿಸಿದ ಅವರು, ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯ ಸುತ್ತಮುತ್ತ ಕುಡಿಯುವ ನೀರಿನ ವ್ಯವಸ್ಥೆ, ಮುಡಿಕಟ್ಟೆ, ಸ್ನಾನಗೃಹಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಕಲ್ಯಾಣಿಯಲ್ಲಿ ಹೂಳು ಹೆಚ್ಚಾಗಿರುವುದರಿಂದ ಅಲ್ಲಿ ಯಾವುದೇ ಅವಘಡವಾಗದಂತೆ ಪೊಲೀಸರನ್ನು ನಿಯೋಜಿಸಲಾಗುವುದು. ಈ ಸಂದರ್ಭ ಬೇಲೂರಿಗೆ ಬರುವ ಪ್ರವಾಸಿಗರು, ಭಕ್ತರಿಗೆ ತೊಂದರೆ ಆಗದಂತೆ ಸರಿಯಾಗಿ ಪಾಕಿರ್ಂಗ್ ವ್ಯವಸ್ಥೆಗೆ ಪೊಲೀಸ್ ಅಧಿಕಾರಿಗಳು ಮುಂದಾಗಬೇಕಿದೆ. ಬಂದಂತಹ ಎಲ್ಲ ಭಕ್ತರಿಗೂ ಯಾವುದೇ ಅನಾನೂಕೂಲವಾಗದಂತೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಟ್ಟಣದ ನಾಲ್ಕು ಭಾಗದಲ್ಲಿ ಸ್ವಾಗತ ಕಮಾನು ನಿರ್ಮಿಸಲು ಪುರಸಭೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಪುರಸಭೆ ಅಧ್ಯಕ್ಷ ಅಶೋಕ್ ಮಾತನಾಡಿ, ಜಾತ್ರಾ ಮಹೋತ್ಸವ ಪ್ರಾರಂಭದಿಂದಲೂ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿ ಹಗಲು ರಾತ್ರಿ ಪೌರಕಾರ್ಮಿಕರು ಕೆಲಸ ಮಾಡುತಿದ್ದಾರೆ. ಜತೆಗೆ ಭಕ್ತರಿಗಾಗಿ ಮೊಬೈಲ್ ಶೌಚಗೃಹ, ಸ್ಥಾನಗೃಹ, ವಿಶ್ರಾಂತಿಗಾಗಿ ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡದ ಮೇಲೂ ವಿದ್ಯುತ್ ದೀಪಗಳಿಂದ ಸಿಂಗರಿಸಲು ಆದೇಶಿಸವೇಕು. ಮತ್ತು ವಿಶೇಷವಾಗಿ ಜಾತ್ರಾ ಮಹೋತ್ಸವ ಆಚರಿಸುತ್ತಿರುವುದರಿಂದ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಶಾಂತಲಾ, ಎಸಿ ಮಾರುತಿ, ಇಒ ಯೋಗೀಶ್, ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟರ್, ನರಸಿಂಹ ಭಟ್ಟರ್, ಪುರಸಭೆ ಸದಸ್ಯರಾದ ಜಗದೀಶ್, ಅಕ್ರಂ, ಶ್ರೀನಿವಾಸ್, ಅರ್ಬನ್ ಬ್ಯಾಂಕ್ ನಿರ್ದೇಶಕ ನಾಗೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net