ಹೆಣ್ಣು ಮಕ್ಕಳನ್ನು ಕೊಂದ ಮಲ ತಂದೆಗೆ ಜೀವಾವಧಿ ಶಿಕ್ಷೆ

court
Published on

ಬೆಂಗಳೂರು: ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದ ಮಲ ತಂದೆಗೆ ಕೇವಲ ನಾಲ್ಕೇ ತಿಂಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಸಿಸಿಎಚ್ 51ನೇ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ. ಸಂತೋಷ್ ತೀರ್ಪು ನೀಡಿದ್ದಾರೆ.

ದಾಸರಹಳ್ಳಿ ಕಾವೇರಿ ಲೈನ್ ನಿವಾಸಿ ಸುಮಿತ್ ಮೋಹನ್ (32) ಶಿಕ್ಷೆಗೆ ಒಳಗಾದ ಅಪರಾಧಿ. 2024ರ ಆಗಸ್ಟ್ 24ರಂದು ಸೃಷ್ಟಿ (16) ಮತ್ತು ಸೋನಿಯಾ (14) ಎಂಬಾಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಿ.ಬಿ. ಸಂತೋಷ್, ಅಪರಾಧಿ ಸುಮಿತ್ ಮೋಹನ್‌ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ.

ಅನಿತಾ ಯಾದವ್ ಮತ್ತು ಜಿತೇಂದ್ರ ದಂಪತಿಗೆ ಸೃಷ್ಟಿ ಮತ್ತು ಸೋನಿಯಾ ಹೆಣ್ಣು ಮಕ್ಕಳು ಇದ್ದರು. 14 ವರ್ಷಗಳ ಹಿಂದೆಯೇ ಜಿತೇಂದ್ರಗೆ ವಿಚ್ಛೇದನ ನೀಡಿದ್ದ ಅನಿತಾ, ದಾಸರಹಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಳು. 4 ವರ್ಷಗಳ ಹಿಂದೆ ಶಾದಿ ಡಾಟ್ ಕಾಮ್‌ನಲ್ಲಿ ಸುಮಿತ್ ಮೋಹನ್ ಪರಿಚಯವಾಗಿ ಇಬ್ಬರು ಮದುವೆ ಆಗಿದ್ದರು. ಸೃಷ್ಟಿ, 9ನೇ ತರಗತಿಯಲ್ಲಿ ಮತ್ತು ಸೋನಿಯಾ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. 2ನೇ ಮದುವೆಯಾದ ಮೇಲೆ ಅನಿತಾ, ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಸರಿನ ಮುಂದೆ ಮೋಹನ್ ಹೆಸರು ಸೇರಿದ್ದಳು. ಇದರ ನಡುವೆ ಹೆಣ್ಣು ಮಕ್ಕಳು ತನ್ನ ಸಹಪಾಠಿಗಳ ಜತೆಗೆ ಮಾತನಾಡುತ್ತಿದ್ದರೇ ತಪ್ಪಾಗಿ ಅರ್ಥೈಸಿಕೊಂಡು ಜಗಳ ತೆಗೆದು ಸುಮಿತ್ ಮೋಹನ್ ಹಲ್ಲೆ ನಡೆಸುತ್ತಿದ್ದ.

2024ರ ಆಗಸ್ಟ್ 24ರ ಬೆಳಗ್ಗೆ ಅನಿತಾ ಮತ್ತು ಸುಮಿತ್ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಸಹ ಶಾಲೆಗೆ ಹೋಗಿದ್ದರು. ವಾಪಸ್ ಬಂದಾಗ ಆರೋಪಿ ಸುಮಿತ್ ಮೋಹನ್, ಹೆಣ್ಣು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿದ್ದ. ಸಂಜೆ ತಾಯಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ನೊಂದ ತಾಯಿ ಅನಿತಾ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎಂ. ಅಂಬರೀಷ್ ನೇತೃತ್ವದ ತಂಡ 24 ಗಂಟೆ ಒಳಗೆ ಸುಮಿತ್ ಮೋಹನ್‌ನ್ನು ಬಂಧಿಸಿತ್ತು. ಶೀಘ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಚ್. ಭಾಸ್ಕರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ.ಸಿ. ಬಿ. ಸಂತೋಷ್ ಕೇವಲ 4 ತಿಂಗಳಲ್ಲಿ ವಿಚಾರಣೆ ಪೂರೈಸಿ ತೀರ್ಪು ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net