

ಬೆಂಗಳೂರು: ತಾಯಿಗೆ ಚಿಕಿತ್ಸೆ ಕೊಡಿಸಲು ಹಾಗೂ ಮೋಜಿನ ಜೀವನ ನಡೆಸಲು ಕಾರಿನ ಬಾಗಿಲಿನ ಲಾಕ್ ಮುರಿದು ನಗದು, ಚಿನ್ನಾಭರಣವಿದ್ದ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈಜೀಪುರ ನಿವಾಸಿ ಸೈಯದ್ ವಾಸೀಫ್(೫೬) ಬಂಧಿತ. ಆರೋಪಿಯಿಂದ ೧೪೪ ಗ್ರಾಂ ಚಿನ್ನಾಭರಣ, ೨ ಲಕ್ಷ ರೂ. ನಗದು ಹಾಗೂ ಕಾರು ಸೇರಿ ಒಟ್ಟು ೧೩.೭೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಹೊರಮಾವು ನಿವಾಸಿ ವಿಜಯಮ್ಮ ಅವರು ತಮ್ಮ ತಂಗಿಯ ಮಗನ ಜತೆಗೆ ಸೆ.೧೯ರಂದು ತಮ್ಮ ಪತಿ ರಾಮಚಂದ್ರ ರೆಡ್ಡಿ ಅವರನ್ನು ಬಾಣಸವಾಡಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ತಮ್ಮ ಕಾರನ್ನು ಆಸ್ಪತ್ರೆ ಪಕ್ಕದ ಕಿರಿದಾದ ರಸ್ತೆಯಲ್ಲಿ ನಿಲುಗಡೆ ಮಾಡಿದ್ದರು. ಆಸ್ಪತ್ರೆಗೆ ತೆರಳುವ ಧಾವಂತದಲ್ಲಿ ೧೦ ಲಕ್ಷ ರೂ. ನಗದು ಹಾಗೂ ೩೦೦ ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು. ಆಸ್ಪತ್ರೆ ಒಳಗೆ ತೆರಳಿದ ಕೆಲ ಸಮಯದ ಬಳಿಕ ಬ್ಯಾಗ್ ನೆನಪಾಗಿ ಕಾರಿನ ಬಳಿ ಬಂದು ನೋಡಿದಾಗ, ಅಪರಿಚಿತರು ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗ್ ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿಗೆ ಚಿಕಿತ್ಸೆ ಕೊಡಿಸಿದ್ದ:
ಸೈಯದ್ ವಾಸೀಫ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ರಿಯಲ್ ಎಸ್ಟೇಟ್ ಏಜೆಂಟ್ ಕೆಲಸ ಮಾಡಿಕೊಂಡಿದ್ದಾನೆ. ಆರೋಪಿಯು ಅಂದು ಟ್ರೈ ಲೈಫ್ ಆಸ್ಪತ್ರೆ ಬಳಿ ಕಾರಿನೊಳಗೆ ಬ್ಯಾಗ್ ಇರುವುದನ್ನು ನೋಡಿ, ತನ್ನ ಬಳಿಯಿದ್ದ ಚಪ್ಪಟೆ ಆಕಾರದ ಸಲಾಕೆಯಿಂದ ಕಾರಿನ ಬಾಗಿಲಿನ ಲಾಕ್ ಮುರಿದು ಬ್ಯಾಗ್ ಕಳವು ಮಾಡಿದ್ದ. ಬಳಿಕ ಕದ್ದ ವಸ್ತುಗಳ ಪೈಕಿ ಕೆಲವು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ. ಅದರಿಂದ ಬಂದ ಹಣದಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿದ್ದ. ನಂತರ ಮೋಜು ಮಾಡಿ ಸ್ವಲ್ಪ ಹಣ ವ್ಯಯಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಕಾರಿನೊಳಗೆ ಚಿನ್ನಾಭರಣ ಇಟ್ಟಿದ್ದ
ಪ್ರಕರಣ ಸಂಬಂಧ ಆರೋಪಿಯ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಈಜೀಪುರ ಮುಖ್ಯರಸ್ತೆಯಲ್ಲಿ ಸೈಯದ್ ವಾಸೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಾರಿನಲ್ಲಿ ಹಣ ಹಾಗೂ ಚಿನ್ನಾಭರಣ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆರೋಪಿ ನೀಡಿದ ಮಾಹಿತಿ ಮೇರೆಗೆ ಈಜೀಪುರ ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಸ್ಯಾಂಟ್ರೋ ಕಾರಿನಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.