ಸರ್ಕಾರಕ್ಕೆ ಒತ್ತಡದ ವರ್ಗಾವಣೆಯ ಉಭಯ ಸಂಕಟ

vidhanasoudha
Published on

ಬೆಂಗಳೂರು: ಶಾಸಕರ ಒತ್ತಡಕ್ಕೆ ಸಿಲುಕಿ ವರ್ಗಾವಣೆ ಪ್ರಕ್ರಿಯೆಗೆ ಕೈಹಾಕಿರುವ ಸರ್ಕಾರಕ್ಕೆ ಈಗ ಹೊಸದೊಂದು ತಲೆನೋವು ಶುರುವಾಗಿದೆ.

ಕಳೆದ 10-15 ದಿನಗಳಲ್ಲಿ ಸಾಕಷ್ಟು ವರ್ಗಾವಣೆ ಆಗಿದೆ. ಈ ನಡುವೆ ಕೆಲವು ಕಡೆ ಅಧಿಕಾರಿಗಳು ಅವಧಿ ಪೂರ್ವ ವರ್ಗಾವಣೆ ಪ್ರಶ್ನೆ ಮಾಡಿ ಕರ್ನಾಟಕ ರಾಜ್ಯ ಆಡಳಿಯ ನ್ಯಾಯ ಮಂಡಳಿ (ಕೆಎಸ್‌ಎಟಿ) ಮೊರೆಹೋಗಿ ಸರ್ಕಾರದ ಆದೇಶಕ್ಕೆ ತಡೆ ತಂದಿದ್ದಾರೆ. ಇನ್ನೊಂದಿಟ್ಟು ಮಂದಿ ಇಷ್ಟರಲ್ಲೇ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ.

ತಮ್ಮ ಪಕ್ಷದ ಶಾಸಕರ ಒತ್ತಾಸೆಯಂತೆ ಅಧಿಕಾರಿಗಳನ್ನು ಬದಲಾಯಿಸಲು ಶಾಸಕರು ಅತ್ಯಾಸಕ್ತಿ ತೋರಿ ಸರ್ಕಾರದ ಮೇಲೆ ಒತ್ತಡತಂದಿದ್ದು, ಶಾಸಕ ಮಿತ್ರರ ಸಹಿ ಸಂಗ್ರಹ ನಡೆಸಿ ಒತ್ತಡ ತಂತ್ರ ಅನುಸರಿಸಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲೂ ಸಹ ಈ ಕುರಿತು ಬಿಸಿಬಿಸಿ ಚರ್ಚೆ ನಡೆದಿತ್ತು.

ಹಾಗೂಹೀಗು ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಬಳಿಕ, ಮುಖ್ಯಮಂತ್ರಿಯವರು ತಮ್ಮ ವಿವೇಚನಾಧಿಕಾರ ಬಳಸಿ ಶಾಸಕರ ಕೋರಿಕೆ ಈಡೇರಿಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ತಹಶೀಲ್ದಾರ್ ವರ್ಗಾವಣೆ ಮತ್ತು ಇದೀಗ ಡಿವೈಎಸ್ಪಿ ವರ್ಗಾವಣೆ ದೊಡ್ಡ ಮಟ್ಟದಲ್ಲಾಗಿದೆ. ಇದನ್ನು ಹೊರತುಪಡಿಸಿ ಇಂಜಿನಿಯರ್‌ಗಳು, ಪಿಡಿಒಗಳ ವರ್ಗಾವಣೆ ಕೂಡ ಆಗಿತ್ತು.

ಈ ಹಿಂದಿನ ಸರ್ಕಾರದ ಕೊನೆ ಅವಧಿಯಲ್ಲಿ ವರ್ಗಾವಣೆ ಮಾಡಿಸಿಕೊಂಡ ಅಥವಾ ಸರ್ಕಾರದ ಆದೇಶದಂತೆ ಸ್ಥಳ ನಿಯುಕ್ತಿಕೊಂಡ ಅಧಿಕಾರಿಗಳು ಕುಟುಂಬ ಸಮೇತರಾಗಿ ಇನ್ನೂ ತಳವೂರಿ ಐದಾರು ತಿಂಗಳಾಗುತ್ತಾ ಬಂದಿದೆ. ಈ ಸರ್ಕಾರ ಅವರನ್ನೆಲ್ಲ ಬೇರೆಡೆ ವರ್ಗಾಯಿಸಿದರೆ ಸಹಜವಾಗಿ ಅಧಿಕಾರಿಗಳಿಗೆ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ಹಲವು ಕೋರ್ಟ್ ಮೆಟ್ಟಿಲೇರಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಕೆಲ ಅಧಿಕಾರಿಗಳು ಕೆಎಟಿ ಮೊರೆ ಹೋಗಿದ್ದಾರೆ. ಅವಧಿ ಪೂರ್ಣಗೊಳ್ಳುವುದಕ್ಕೂ ಮೊದಲೇ ವರ್ಗಾವಣೆ ಮಾಡಿದ್ದಾರೆಂದು ಕೆಎಟಿಗೆ ಹೋಗಿದ್ದಾರೆ ಎಂದರು.

ನಮ್ಮ ಇಲಾಖೆ, ಬೇರೆಯವರ ಇಲಾಖೆಯಲ್ಲಿ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಸಾಮಾನ್ಯವಾಗಿ ಒಂದು ಸ್ಥಳದಲ್ಲಿ ಇರಲು ಅಧಿಕಾರಿಗಳಿಗೆ ಎರಡು- ಮೂರು ವರ್ಷ, ಐದು ವರ್ಷ ಅವಧಿ ಇರುತ್ತದೆ.

ಹೀಗಿದ್ದಾಗ ಅವಧಿ ಪೂರ್ವ ವರ್ಗಾವಣೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದರೆ ನಾವು ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಕೂಡ ಏಕಾಏಕಿ ವರ್ಗಾವಣೆ ಮಾಡಲಾಗದು ಎಂದಿದ್ದಾರೆ. ಶಾಸಕರು ಕೇಳಿದಂತೆಲ್ಲಾ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದ ಅವರು ಕೆಲವು ಶಾಸಕರು ಕೇಳಿದ ವರ್ಗಾವಣೆ ಮಾಡಿದ್ದೆವು. ಆ ಅಧಿಕಾರಿಗಳು ಈಗ ನಿಯಮ ಉಲ್ಲಂಘನೆ ಆರೋಪ ಮಾಡಿದ್ದಾರೆ, ಇದನ್ನ ಶಾಸಕರಿಗೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಶಾಸಕರು ಹಾಗೂ ಸಚಿವರ ನಡುವೆಯೇ ಪೈಪೋಟಿ ಏರ್ಪಟ್ಟಿರುವ ಉದಾಹರಣೆಗಳು ನಡೆದಿವೆ. ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಹಾಕಿಸಿಕೊಳ್ಳಲು ಕೆಲವೆಡೆ ಒಬ್ಬರಿಗಿಂತ ಹೆಚ್ಚು ಸಚಿವರಿಂದ ಪ್ರಯತ್ನ ನಡೆದಾಗ ಇಂತಹ ಬೆಳವಣಿಗೆ ನಡೆದಿದೆ.

ಈ ಕುರಿತಂತೆಯೂ ಸಚಿವ ಸತೀಶ್ ಜಾರಕಿಹೊಳಿ ತಮಗೆ ಎದುರಾದ ಸಂಕಟ ತೋಡಿಕೊಂಡಿದ್ದಾರೆ. ಹೌದು.. ಅಧಿಕಾರಿಗಳ ವರ್ಗಾವಣೆಯಲ್ಲಿ ಕೆಲವೊಮ್ಮೆ ಗೊಂದಲಗಳಾಗುತ್ತದೆ. ಅವರಿಗೆ ಬೇಕಾದ ಅಧಿಕಾರಿ ವರ್ಗಾವಣೆ ಬೇಕು ಅನ್ನುತ್ತಾರೆ. ನಮಗೆ ಬೇಕಾದ ಅಧಿಕಾರಿಗಳು ಇರಲಿ ಎಂದು ನಾವಿರುತ್ತೇವೆ. ಹೀಗಿದ್ದಾಗ ಗೊಂದಲಗಳಾಗುವುದು ಸಹಜ. ಕೊಟ್ಟು ತೆಗೆದುಕೊಳ್ಳುವ ಪದ್ಧತಿ ಮಾಡಿಕೊಂಡಿದ್ದೇವೆ. ಕೆಲವೊಮ್ಮೆ ನಾವು ಬಿಟ್ಟು ಕೊಡುತ್ತೇವೆ. ಮಗವೊಮ್ಮೆ ಅವರು ನಮಗೆ ಬಿಟ್ಟು ಕೊಡುತ್ತಾರೆ ಎಂದು ಬೆಳಗಾವಿ ಜಿಲ್ಲೆಯಲ್ಲಿನ ವರ್ಗಾವಣೆ ಸಂಬಂಧ ಪ್ರತಿಕ್ರಿಯೆ ನೀಡಿದರು.

- 45 ಡಿವೈಎಸ್ಪಿಗಳ ವರ್ಗ

ಸರ್ಕಾರ ಸೋಮವಾರ 45 ಡಿವೈಎಸ್ಪಿಗಳನ್ನು ವರ್ಗಾಯಿಸಿದೆ. ಶಾಸಕರ ಬೇಡಿಕೆ, ಅಧಿಕಾರಿಗಳ ಕೋರಿಕೆ ಮತ್ತು ಆಯಕಟ್ಟಿನ ಸ್ಥಳಗಳಿಗೆ ನಿಯೋಜನೆ ಮಾಡಿರುವುದು ಈ ಪಟ್ಟಿಯಿಂದ ಗೊತ್ತಾಗುತ್ತಿದೆ. ಭಾನುವಾರ ಇದೇ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಗೌಪ್ಯ ಸಭೆ ನಡೆಸಿದ್ದರು. ಯಾವೆಲ್ಲ ಶಾಸಕರ ಬೇಡಿಕೆ ಇದೆ ಎಂಬ ಬಗ್ಗೆ ಚರ್ಚೆ ನಡೆಸಿದ್ದರು. ಶಾಸಕರು ಕೇಳಿದಷ್ಟು ವಿಶೇಷ ಅನುದಾನವನ್ನಂತೂ ಕೊಡುತ್ತಿಲ್ಲ, ಶಾಸಕರು ಬೇಡಿಕೆಯ ವರ್ಗಾವಣೆಯನ್ನಾದರೂ ಮಾಡೋಣ ಎಂಬ ತೀರ್ಮಾನಕ್ಕೆ ಬಂದಂತಿದೆ.

- ಇನ್ನೂ ಇದೆ ದೊಡ್ಡ ಪಟ್ಟಿ

ಪಿಡಿಒ, ತಹಶೀಲ್ದಾರ್, ಇಂಜಿನಿಯರ್, ಡಿವೈಎಸ್ಪಿಗಳ ಒಂದು ಹಂತದ ವರ್ಗಾವಣೆ ನಡೆದಿದೆ. ಈ ವಾರದಲ್ಲೇ ಡಿವೈಎಸ್ಪಿ ಹಾಗೂ ತಹಶೀಲ್ದಾರ್ ಎರಡನೇ ಪಟ್ಟಿ, ಐಪಿಎಸ್ ಹಾಗೂ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಕೂಡ ನಡೆಯಲಿದೆ. ಪಟ್ಟಿ ತಯಾರಾಗುತ್ತಿದ್ದು, ಶಾಸಕರ ಬೇಡಿಕೆ ಮತ್ತು ಕೋರಿಕೆಗೆ ಮಹತ್ವ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net