ಯತ್ನಾಳ್ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

highcourt
Published on

ಬೆಂಗಳೂರು : ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾದ ಎರಡು ಪ್ರತ್ಯೇಕ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡಿರುವ ವಿಜಯಪುರ ಗಾಂಧಿ ಚೌಕ ಠಾಣಾ ಪೊಲೀಸರು, ದೂರುದಾರರಾದ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ಮತ್ತು ಚುನಾವಣಾ ಸಂಚಾರಿ ವಿಚಕ್ಷಣಾ ಅಧಿಕಾರಿ ಎಸ್.ಬಿ. ಜಿದ್ದಿಮನಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.


‘ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ’ ಎಂದಿದ್ದಾರೆ ಹೊರತು ಅವರ ಪತ್ನಿಗೆ ಪಾಕಿಸ್ತಾನದವರು ಎಂದಿಲ್ಲ. ಆದರೆ, ತನ್ನನ್ನು ಪಾಕಿಸ್ತಾನದ ಉಗ್ರಗಾಮಿಗಳಿಗೆ ಹೋಲಿಸಿರುವುದಾಗಿ ದೂರುದಾರರು ಹೇಳಿದ್ದಾರೆ. ಇದು ಅವರ ಊಹೆ. ಇಂತಹ ಹೇಳಿಕೆಯಿಂದ ದಂಪತಿ ಅನುಕಂಪಗಳಿಸುವ ಉದ್ದೇಶ ಹೊಂದಿರಬಹುದು. ಆದರೆ ಇದಕ್ಕೆ ಅರ್ಜಿದಾರರು ಜವಾಬ್ದಾರರಲ್ಲ ಎಂದು ಯತ್ನಾಳ್ ಪರ ವಕೀಲ ವೆಂಕಟೇಶ ಪಿ. ದಳವಾಯಿ ವಾದಿಸಿದರು.


ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ದೂರಲಾಗಿದೆ. ಆದರೆ, ಪಾಕಿಸ್ತಾನ ಒಂದು ದೇಶ, ಧರ್ಮವಲ್ಲ. ಅರ್ಜಿದಾರರು ಧರ್ಮದ ನಡುವೆ ದ್ವೇಷ ಹುಟ್ಟು ಹಾಕುವ ಯಾವುದೇ ಹೇಳಿಕೆಯನ್ನಾಗಲಿ, ವರ್ತನೆಯನ್ನಾಗಿ ತೋರಲಿಲ್ಲ. ಹೀಗಾಗಿ, ಅವರ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕಿದೆ. ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್ ಹಾಗೂ ತನಿಖೆಗೆ ತಡೆ ನೀಡಬೇಕು ಎಂದು ಕೋರಿದ್ದರು.

ಏನಿದು ಪ್ರಕರಣ ?
ರಾಮೇಶ್ವರಂ ಕೆಫೆ ಬಾಂಬ್ ಸ್ಫೊಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಏ.6 ರಂದು ಸುದ್ದಿಗಾರರ ಜತೆ ಮಾತನಾಡಿದ್ದ ಶಾಸಕ ಯತ್ನಾಳ್, ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶ ವಿರೋಧಿ ಹೇಳಿಕೆ ಕೊಡುವುದು ಗುಂಡುರಾವ್‌ಗೆ ಚಟ ಆಗಿದೆ ಎಂದು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆ ಯತ್ನಾಳ್ ವಿರುದ್ಧ ದೂರು ದಾಖಲಿಸಿರುವ ಟಬು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಮ್ಮ ಕುಟುಂಬದ ಗೌರವ ಹಾಳು ಮಾಡುವ ದುರುದ್ದೇಶದಿಂದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ನೋವುಂಟು ಮಾಡಿ, ಸಾರ್ವಜನಿಕವಾಗಿ ಅವಹೇಳನ ಮಾಡಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿ ದೂರು ದಾಖಲಿಸಿದರು. ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣ ಸಂಬಂಧ ಅರ್ಜಿದಾರರು ಚುನಾವಣಾ ನೀತಿಸಂಹಿತೆ ಉಲ್ಲಂಸಿದ್ದಾರೆಂದು ಚುನಾವಣಾ ಸಂಚಾರ ವಿಚಕ್ಷಣಾ ಅಧಿಕಾರಿ ಎಸ್.ಬಿ. ಜಿದ್ದಿಮನಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net