

ಸೊರಬ: ಗ್ರಾಮೀಣ ಜನರು ಕೆಲವು ದಾಖಲೆಗಳಿಗಾಗಿ ತಾಲೂಕು ಕೇಂದ್ರಕ್ಕೆ ಬರುವುದರಿಂದ ಅವರ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ ಎಂಬ ಉದ್ದೇಶದಿಂದ ಹೋಬಳಿ ಕೇಂದ್ರಗಳಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳನ್ನು (ನಾಡ ಕಚೇರಿ) ಸ್ಥಾಪಿಸಲಾಗಿದೆ. ಆದರೆ ಹೋಬಳಿ ಕೇಂದ್ರದಲ್ಲಿ ಸ್ಥಾಪಿಸಿದ ಕಚೇರಿಗೂ ಸಾರಿಗೆ ಸಂಪರ್ಕ ಇರದಿದ್ದರೆ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತಿದೆ ಉಳವಿ ನಾಡ ಕಚೇರಿ.
ಉಳವಿ ನಾಡ ಕಚೇರಿಯನ್ನು ಈ ಹಿಂದೆ ಮುಖ್ಯ ರಸ್ತೆಯ ಶಾಲಾ ಕಟ್ಟಡದಲ್ಲಿ ತೆರೆಯಲಾಗಿತ್ತು. ಈ ಕಚೇರಿ ವ್ಯಾಪ್ತಿಯಲ್ಲಿ 10 ವೃತ್ತಗಳು ಹಾಗೂ 80 ಹಳ್ಳಿಗಳಿವೆ. ಎಲ್ಲ ವೃತ್ತಗಳ ಗ್ರಾಮ ಲೆಕ್ಕಿಗರು, ಆರ್‌ಐ ಸೇರಿ ಎಲ್ಲ ಸಿಬ್ಬಂದಿ ಒಂದೇ ಸೂರಿನಲ್ಲಿ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರ ಓಡಾಟಕ್ಕೆ ಬಸ್ ಸೌಕರ್ಯ ಉತ್ತಮವಾಗಿತ್ತು. ಇದರಿಂದ ನಾಡಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಬೇಗ ಆಗುತ್ತಿದ್ದವು.
ಈಗ ನಾಡಕಚೇರಿಯನ್ನು ಉಳವಿ-ಶಿರಾಳಕೊಪ್ಪ ರಸ್ತೆಯ ಕಾನಹಳ್ಳಿ ಗ್ರಾಮದ ಬಳಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಉಳವಿಯಿಂದ 2 ಕಿ.ಮೀ ದೂರವಿದೆ. ಕಾನಹಳ್ಳಿಗೆ ಬಸ್ ಸೌಲಭ್ಯ ಇಲ್ಲ. ಸ್ವಂತ ವಾಹನ ಇಲ್ಲದವರು ನಡೆದುಕೊಂಡು ಹೋಗಬೇಕಿದೆ. ಸಾಮಾನ್ಯವಾಗಿ ದಿನನಿತ್ಯ ಸಾರ್ವಜನಿಕರು ಆದಾಯ, ಜಾತಿ, ವಿಧವಾ ವೇತನ ಪ್ರಮಾಣ ಪತ್ರ, ಪಡಿತರ ಚೀಟಿ ಮತ್ತಿತರ ದಾಖಲೆ ಪಡೆಯಲು ನಾಡಕಚೇರಿಗೆ ಹೋಗಲೇಬೇಕು. ಅರ್ಜಿಗಳಿಗೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ದೃಢೀಕರಣ ಬೇಕು. ಇವರೆಲ್ಲ ಉಳಿವಿ ಹಳೇ ಕಚೇರಿಯಲ್ಲೆ ಇದ್ದಾರೆ. ಇವರ ಬಳಿ ಆಗಬೇಕಾದ ಹಾಗೂ ನಾಡ ಕಚೇರಿಯಲ್ಲಿ ಆಗಬೇಕಾದ ಕೆಲಸಕ್ಕೆ ಸಾರ್ವಜನಿಕರು ಅಲೆದಾಡಬೇಕಿದೆ. ವೃದ್ಧರು, ಅಂಗವಿಕಲರು, ವಾಹನ ಇಲ್ಲದ ಬಡವರು ಪ್ರಮಾಣ ಪತ್ರಗಳಿಗಾಗಿ ಓಡಾಡಿ ಹೈರಾಣಾಗಿದ್ದಾರೆ. ಅಲ್ಲದೆ ನಾಡಕಚೇರಿ ಇರುವ ಬಗ್ಗೆ ಕಾನಹಳ್ಳಿ ಬಳಿ ಯಾವುದೇ ನಾಮಲಕ ಇಲ್ಲ. ಕೆಲವರು ನಾಡಕಚೇರಿ ಎಲ್ಲಿದೆ ಎಂದು ಹುಡುಕಾಡಬೇಕಿದೆ. ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಎರಡ್ಮೂರು ದಿನ ಅಲೆಯುವಂತಾಗಿದೆ.
ಸೌಕರ್ಯಗಳ ಕೊರತೆ: ಕಾನಹಳ್ಳಿ ಬಳಿ ನಾಡ ಕಚೇರಿ 2023ರ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಲಾಗಿತ್ತು. ಆರಂಭದಲ್ಲಿ ನೆಟ್‌ವರ್ಕ್ ಸಮಸ್ಯೆ ಹಾಗೂ ಸಾರ್ವಜನಿಕರ ಸ್ಪಂದನೆ ಇಲ್ಲದೆ ಬಿಕೋ ಎನ್ನುತ್ತಿತ್ತು. ಇದನ್ನು ಮನಗಂಡ ಕಂದಾಯ ಇಲಾಖೆ ಹಳೆಯ ಕಚೇರಿಗೆ ಸ್ಥಳಾಂತರ ಮಾಡಿತ್ತು.ಈಗ ಪುನಃ ಹೊಸ ಕಟ್ಟಡದಲ್ಲಿ ನಾಡ ಕಚೇರಿ ಕೆಲಸ ಕಾರ್ಯ ಆರಂಭವಾಗಿದೆ. ಕಚೇರಿ ಉತ್ತಮ ಪರಿಸರದಲ್ಲಿ ಇದ್ದರೂ ಮೂಲ ಸೌಕರ್ಯ, ಸಿಸಿ ಕ್ಯಾಮರಾ, ರಾತ್ರಿ ವೇಳೆ ಭದ್ರತೆ ಇಲ್ಲದಂತಾಗಿದೆ. ನಾಡಕಚೇರಿ ಬಳಿ ಸುತ್ತಮುತ್ತ ಸರ್ಕಾರ ಗುರುತಿಸಿದ ಸುಮಾರು 8 ಎಕರೆ ಜಾಗವಿದೆ. ಈ ಜಾಗದಲ್ಲಿ ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಿ, ಮೂಲ ಸೌಲಭ್ಯ ಒದಗಿಸಿ ಒಂದೇ ಸೂರಿನಡಿ ಎಲ್ಲ ಕೆಲಸಗಳು ನಡೆಯುವಂತೆ ಮಾಡಿದಾಗ ಸಾರ್ವಜನಿಕರ ಅಲೆದಾಟ ತಪಿಸಬಹುದು.
ಸರ್ಕಾರಿ ಭೂಮಿ ಅತಿಕ್ರಮಣ ಆಗುತ್ತಿರುವುದನ್ನು ಮನಗಂಡು ಕಂದಾಯ ಮತ್ತು ಗ್ರಾಪಂ ಸದಸ್ಯರು ಸರ್ಕಾರಿ ಕಟ್ಟಡ ಮತ್ತು ಸೌಲ್ಯಭ್ಯಕ್ಕಾಗಿ 8 ಎಕರೆಗೂ ಹೆಚ್ಚು ಜಾಗವನ್ನು ಕಾನಹಳ್ಳಿ ರಸ್ತೆ ಬಳಿ ಗುರುತಿಸಿ ನಾಡಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಈಗ ಸಾರ್ವಜನಿಕರಿಗೆ ದೂರವಾಗಿರುವುದು ಸತ್ಯವಾದರೂ ಮುಂದಿನ ದಿನಗಳಲ್ಲಿ ಎಲ್ಲ ಸಿಬ್ಬಂದಿ ಒಂದೆಡೆ ಸಿಗುವಂತೆ ಕಟ್ಟಡ ನಿರ್ಮಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎನ್ನುತ್ತಾರೆ ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್.