ರಾಜ್ಯಪಾಲರ ವಿರುದ್ಧ​ 'ಕೈ' ಕಾರ್ಯಕರ್ತರು ಕಿಡಿ! ಸಿಎಂ ಪರ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ವಿಜಯವಾಣಿ - 2024-08-19T121720.400
Published on

ಬೆಂಗಳೂರು: ಮೈಸೂರಿನ ಮುಡಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ದೊಡ್ಡ ಹಗರಣವೊಂದು ನಡೆದಿದೆ ಎಂಬ ಆರೋಪದಡಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದರು. ಸದ್ಯ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆ.19) ರಿಟ್​ ಅರ್ಜಿ ಸಲ್ಲಿಸಿದ್ದಾರೆ. ಇನ್ನು ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಕೈಗೊಂಡಿರುವ ಕಾಂಗ್ರೆಸ್​ ಕಾರ್ಯಕರ್ತರು, ಷಡ್ಯಂತ್ರಕ್ಕೆ ಸವಾಲ್ ಎಂಬ ಹೆಸರಿನಡಿ ಕಾಲ್ನಡಿಗೆಯಲ್ಲಿ ಭಾಗಿಯಾಗಿದ್ದಾರೆ.

ಎಲ್ಲೆಲ್ಲಿ ಪ್ರತಿಭಟನೆ: 

ಇದೆಲ್ಲವೂ ಬಿಜೆಪಿ ಪಿತೂರಿ ಎಂದು ಆರೋಪಿಸಿ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವ 'ಕೈ' ಕಾರ್ಯಕರ್ತರು, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ವಿರುದ್ಧ ಘೋಷಣೆಗಳನ್ನು ಕೂಗುತ್ತ ಧರಣಿ ನಡೆಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದರೆ, ಇತ್ತ ತುಮಕೂರು, ರಾಯಚೂರು, ಮಂಗಳೂರು, ಬೆಂಗಳೂರು, ಬೆಂಗಳೂರು ಗ್ರಾ., ದಾವಣಗೆರೆ, ಮೈಸೂರು ಸೇರಿದಂತೆ ಹಲವೆಡೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಲ್ನಡಿಗೆಯಲ್ಲಿ ಭಾಗಿಯಾಗಿರುವ ಅಪಾರ ಸಂಖ್ಯೆಯ ಕಾಂಗ್ರೆಸ್​ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಲ್ಲ ಎಂದು ಧ್ವನಿ ಏರಿಸುತ್ತಿದ್ದಾರೆ.

ಇಂದು ಮಧ್ಯಾಹ್ನ ಸಿಎಂ ಸಲ್ಲಿಸಿದ ರಿಟ್​ ಅರ್ಜಿ ವಿಚಾರಣೆ:

ಈ ಪ್ರಕರಣದಲ್ಲಿ ತುರ್ತು ವಿಚಾರಣೆಗೆ ಒಪ್ಪಿರುವ ಕರ್ನಾಟಕ ಹೈಕೋರ್ಟ್​ ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲು ಒಪ್ಪಿದೆ. ಸಿಎಂ ಪರ ವಕೀಲ ರವಿವರ್ಮ ಕುಮಾರ್​ ಅವರು ವಾದ ಮಂಡನೆ ಮಾಡಲಿದ್ದಾರೆ. ನ್ಯಾಯಮೂರ್ತಿ ಹೇಮಂತ್​ ಕುಮಾರ್​ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್​ ಹಿರಿಯ ವಕೀಲರುಗಳಾದ ಕಪಿಲ್​ ಸಿಬಲ್​, ಅಭಿಷೇಕ್​ ಮನು ಸಿಂಗ್ವಿ ಹಾಗೂ ಪ್ರಶಾಂತ್​ ಭೂಷಣ್​ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಮಂತ್ರಾಲಯ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಪ್ರವಾಸವನ್ನು ರದ್ದುಗೊಳಿಸಿ ಬೆಂಗಳೂರಿನಲ್ಲೇ ಉಳಿದುಕೊಂಡು ವಕೀಲರುಗಳ ಜತೆ ಚರ್ಚೆ ನಡೆಸಿ, ಕಾನೂನು ಹೋರಾಟದಲ್ಲಿ ನಿರತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net