

ಶಿವಮೊಗ್ಗ: ಆಹಾರ ಮತ್ತು ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ ಮಾತ್ರವಲ್ಲ, ಹಳಸಲು ತಂತ್ರಜ್ಞಾನ ಎನ್ನುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಕುಲಾಂತರಿ ಉಚ್ಚಾಟನೆ ಕಾರ್ಯಕ್ರಮದಡಿ ಸಾಮೂಹಿಕ ನಾಯಕತ್ವದಲ್ಲಿ ಸೆ.26ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ನಾಯಕ ಕೆ.ಟಿ.ಗಂಗಾಧರ ಹೇಳಿದರು.
ಬಿಟಿ ಬದನೆ ಪ್ರಕರಣದಲ್ಲಿ ನಡೆದಂತೆ ವ್ಯಾಪಕ ಮತ್ತು ಅರ್ಥಪೂರ್ಣ ಚರ್ಚೆಗಳು ಎಲ್ಲ ನಾಗರಿಕರಿಗೂ ಮುಕ್ತವಾಗಿರಬೇಕು. ಜಿಲ್ಲಾ ಮಟ್ಟದಲ್ಲಿ ಚರ್ಚೆಗಳನ್ನು ನಡೆಸಬೇಕು. ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಹಕ್ಕುಬಾಧ್ಯಸ್ತರು ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡಿರಬೇಕು ಎಂಬುದೂ ಸೇರಿ ವಿವಿಧ ಹಕ್ಕೊತ್ತಾಯಗಳನ್ನು ಸಂಯುಕ್ತ ಕಿಸಾನ್ ಮೋರ್ಚಾದಡಿ ಮಂಡಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ತರುವ ಬಗ್ಗೆ ರಾಷ್ಟ್ರೀಯ ಜೈವಿಕ ಸುರಕ್ಷತಾ ನೀತಿ ರಚಿಸಿ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ನೇತೃತ್ವದಲ್ಲಿ ರಾಜ್ಯ ಸರ್ಕಾರ, ರೈತ ಪ್ರತಿನಿಧಿಗಳು, ಪರಿಸರವಾದಿಗಳೊಂದಿಗೆ ಚರ್ಚಿಸಿ ಭಾರತದ ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ಅಗತ್ಯದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಕಾಯ್ದೆ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದು ಹೇಳಿದರು.
ಆಹಾರ ಪದ್ಧತಿ ಹಾಗೂ ಕೃಷಿಯಲ್ಲಿ ಕುಲಾಂತರಿ ತಂತ್ರಜ್ಞಾನ ತರಬೇಕೆಂದು ಕೆಲ ಬಂಡವಾಳಶಾಹಿಗಳು ಹುನ್ನಾರ ನಡೆಸುತ್ತಿದ್ದಾರೆ. ಕುಲಾಂತರಿ ತಂತ್ರಜ್ಞಾನ ಎನ್ನುವುದು ಪ್ರಾಣಿ-ಪಕ್ಷಿಗಳ ಜೀವಸತ್ವ ಹೊರತೆಗೆದು ಸಸ್ಯಗಳ ಮೇಲೆ ಪ್ರಯೋಗ ಮಾಡುವ ಪಿತೂರಿ. ಇದಕ್ಕೆ ಜಾಗತಿಕವಾಗಿ ಮುಂದುವರಿದ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಕುಲಾಂತರಿ ತಂತ್ರಜ್ಞಾನ ಪದ್ಧತಿಯ ಆಹಾರ ಸೇವನೆಯಿಂದ ಮನುಷ್ಯ ಹಾಗೂ ಜೀವಸಂಕುಲದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪರಿಸರದ ಅವನತಿಯೂ ಆಗಲಿದೆ. ಆದ್ದರಿಂದ ಈ ಪದ್ಧತಿ ತಿರಸ್ಕರಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಗಿರೀಶ್ ಮಾಳೇನಹಳ್ಳಿ, ಜಗದೀಶ್ ನಾಯಕ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
ಅಡಕೆ ಆಮದು ನಿರ್ಧಾರ ಹಿಂಪಡೆಯಲಿ
ಅಡಕೆ ಬೆಳೆಯುವ ನಾಡಲ್ಲಿ ಈಗ ಧಾರಣೆ ಏರಿಳಿತದಿಂದ ಕೃಷಿಕರಲ್ಲಿ ಅಸ್ಥಿರತೆ ಕಾಡುತ್ತಿದೆ. ತಕ್ಷಣವೇ ಸರ್ಕಾರ, ಜನಪ್ರತಿನಿಧಿಗಳು ಅಡಕೆ ಆಮದು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಡಕೆ ಮಾರುಕಟ್ಟೆ ಸ್ಥಿರತೆಗೆ ಕಾರಣವಾಗಬೇಕು. ಭೂತಾನ್‌ನಿಂದ ಕನಿಷ್ಠ ಆಮದು ಬೆಲೆಯ ಷರತ್ತು ಇಲ್ಲದೆಯೇ ಹಸಿ ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ಹಿಂಪಡೆಯಬೇಕು ಎಂದು ಕೆ.ಟಿ.ಗಂಗಾಧರ್ ಆಗ್ರಹಿಸಿದರು. ಅಡಕೆ ಆಹಾರ ಪದಾರ್ಥವಲ್ಲ. ಆದ್ದರಿಂದ ಕೃಷಿಯಿಂದ ರೈತರನ್ನು ದೂರವಾಗಿಸುವ ಪಿತೂರಿಯನ್ನು ಪ್ರಸ್ತುತ ಸರ್ಕಾರಗಳು ಮಾಡುತ್ತಿವೆ. ಇಲ್ಲಿ ಮುಂದಾಲೋಚನೆ ಇಲ್ಲದೆ ಅಡಕೆಯನ್ನು ತೆರಿಗೆರಹಿತವಾಗಿ ಕೈಗಾರಿಕೋದ್ಯಮಿಗಳಿಗೆ ರಪ್ತು ಮಾಡುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ರಾಜ್ಯದ ಅಡಕೆ ಬೆಳೆಗಾರರ ಶೋಷಣೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಸೀಡ್ ಬ್ಯಾಂಕ್ ಸ್ಥಾಪನೆಗೆ ಒತ್ತಾಯ
ರಾಜ್ಯದಲ್ಲಿ ಬಿತ್ತನೆ ಬೀಜದ (ಸೀಡ್) ಬ್ಯಾಂಕ್ ಸ್ಥಾಪಿಸಬೇಕು. ಇದರಿಂದ ಕೃಷಿಯ ಅಸ್ತಿತ್ವ ಉಳಿಯಲಿದೆ ಎಂದು ಕೆ.ಟಿ.ಗಂಗಾಧರ್ ಅಭಿಪ್ರಾಯಪಟ್ಟರು. ಬೆಂಗಳೂರಿನ ಹೆಬ್ಬಾಳದಲ್ಲಿ ಬೀಜ ನಿಗಮ ಸ್ಥಾಪನೆಗೆ 5 ಎಕರೆ ಭೂಮಿ ಗುರುತಿಸಲಾಗಿತ್ತು. ಆದರೆ ಇದರಿಂದ ಲಾಭವಿಲ್ಲ ಎಂದು ಅರಿತ ಸರ್ಕಾರ ಲಿಕ್ಕರ್(ಮದ್ಯ) ಕಂಪನಿಗೆ ಮಾರಾಟ ಮಾಡಿಕೊಂಡಿದೆ. ಅಮೆರಿಕದಲ್ಲಿ ಸೀಡ್ ಬ್ಯಾಂಕ್ ಸ್ಥಾಪಿಸಿ ಬೀಜಗಳನ್ನು ದಾಸ್ತಾನು ಮಾಡಿದೆ. ಇದೇ ಮಾದರಿಯ ಪ್ರಯೋಗ ಭಾರತದಲ್ಲೂ ಆಗಬೇಕು ಎಂದು ಒತ್ತಾಯಿಸಿದರು.