ದೀಪೋತ್ಸವದ ಬಗ್ಗೆ ಹೇಳಿಕೆ; ಅಖಿಲೇಶ್ ಯಾದವ್ ಸನಾತನಿಗಳ ಶತ್ರು ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್| Giriraj Singh

FotoJet (28) (1)
Published on

New Delhi: ಅಯೋಧ್ಯೆಯ ದೀಪೋತ್ಸವದ ಬಗೆಗಿನ ಖರ್ಚಿನ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್(Giriraj Singh) ತೀವ್ರ ವಾಗ್ದಾಳಿ ನಡೆಸಿದ್ದು, ಸೋಮವಾರ(ಅ. 20) ಅವರನ್ನು ಸನಾತನಿಗಳು ಮತ್ತು ಹಿಂದೂಗಳ ಶತ್ರು ಎಂದು ಕರೆದಿದ್ದಾರೆ.

ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆ ಸಂದರ್ಭದಲ್ಲಿ ಯುಪಿ ಸರ್ಕಾರ ಮೇಣದ ಬತ್ತಿ, ದೀಪಗಳನ್ನು ಬೆಳಗಿಸಲು ಮಾಡುವ ಖರ್ಚಿನ ಬಗ್ಗೆ ಪ್ರಶ್ನೆ ಎತ್ತಿದ್ದ ಅಖಿಲೇಶ್ ಯಾದವ್, ಭಗವಾನ್ ರಾಮನ ಹೆಸರಿನಲ್ಲಿ ನಾನೊಂದು ಸಲಹೆ ನೀಡುತ್ತೇನೆ. ಕ್ರಿಸ್‌ಮಸ್ ಸಮಯದಲ್ಲಿ ಪ್ರಪಂಚದಾದ್ಯಂತ ಎಲ್ಲಾ ನಗರಗಳು ದೀಪಗಳಿಂದ ಬೆಳಗುತ್ತವೆ, ಮತ್ತು ಅದು ತಿಂಗಳುಗಳವರೆಗೆ ಮುಂದುವರಿಯುತ್ತದೆ. ನಾವು ಅವರಿಂದ ಕಲಿಯಬೇಕು. ನಾವು ದೀಪಗಳು ಮತ್ತು ಮೇಣದಬತ್ತಿಗಳಿಗಾಗಿ ಹಣವನ್ನು ಖರ್ಚು ಮಾಡಿ ಅದರ ಬಗ್ಗೆ ಏಕೆ ಹೆಚ್ಚು ಯೋಚಿಸಬೇಕು? ಎಂದಿದ್ದರು.

ಅಖಿಲೇಶ್ ಯಾದವ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟೀಕಿಸುವುದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಅವನು ಸನಾತನಿಗಳು ಮತ್ತು ಹಿಂದೂಗಳ ಶತ್ರು. ಅವನಿಗೆ ದೀಪಾವಳಿಯಲ್ಲಿ ಸಮಸ್ಯೆ ಇದೆ, ಆದರೆ ಕ್ರಿಸ್‌ಮಸ್‌ನಲ್ಲಿ ಅಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ಅಖಿಲೇಶ್ ಯಾದವ್ ಮೂಲಭೂತವಾದಿಗಳ ಮತಗಳ ಪ್ರೀತಿಯಿಂದ ಎಷ್ಟು ಕುರುಡರಾಗಿದ್ದಾರೆಂದರೆ, ಅವರು ಈಗ ತಮ್ಮದೇ ಯಾದವ ಸಮುದಾಯದ ವಿರುದ್ಧ ಮಾತನಾಡಲು ಪ್ರಾರಂಭಿಸಿದ್ದಾರೆ.  ಪ್ರಜಾಪತಿ ಸಮುದಾಯದ ಸಮೃದ್ಧಿಯನ್ನು ಕಸಿದುಕೊಳ್ಳಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ, ಭಾರತೀಯ ಸಂಸ್ಕೃತಿಯಲ್ಲಿ ದೀಪಗಳನ್ನು ಬೆಳಗಿಸುವುದು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವಾಗಿದೆ. ಬೆಳಕು, ಸಾಮರಸ್ಯ, ನಂಬಿಕೆ ಹಾಗೂ ಭಕ್ತಿಯನ್ನು ಸಂಕೇತಿಸುತ್ತದೆ. ಆದರೆ ನೀವು ದೀಪಾವಳಿಯ ದೀಪಗಳನ್ನು ಮಾರಾಟ ಮಾಡುವ ಪ್ರಜಾಪತಿ ಸಮುದಾಯದ ಉದ್ಯೋಗವನ್ನು ಕಸಿದುಕೊಳ್ಳುವ ಹೇಯ ಕೃತ್ಯವನ್ನು ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.

ಭಾನುವಾರ ಅಯೋಧ್ಯೆಯಲ್ಲಿ ನಡೆದ ಈ ವರ್ಷದ ದೀಪೋತ್ಸವದಲ್ಲಿ ಎರಡು ಹೊಸ ವಿಶ್ವ ದಾಖಲೆಗಳು ನಿರ್ಮಾಣವಾದವು. ದೇವಾಲಯ ಪಟ್ಟಣದಲ್ಲಿ ನಡೆದ ಭವ್ಯ ಆಚರಣೆಗಾಗಿ 2,128 ಜನರು ಒಟ್ಟಾಗಿ 'ಆರತಿ' ಸಲ್ಲಿಸಿದಾಗ ಒಂದೇ ಸ್ಥಳದಲ್ಲಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net