ಶಾಸಕ ನಂಜೇಗೌಡ ವಿರುದ್ಧದ ಇಡಿ ಕೇಸ್ ರದ್ದುಗೊಳಿಸಿದ ಹೈಕೋರ್ಟ್: Malur Mla Nanjegowda

ಭೂ ಅಕ್ರಮ ಮಂಜೂರಾತಿ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) (ಆಗಿನ ಕೋಚಿಮುಲ್) ನೇಮಕಾತಿ ಅಕ್ರಮ ಆರೋಪ ಸಂಬಂಧ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಇಸಿಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದಾಖಲಿಸಿದ್ದ ಖಾಸಗಿ ದೂರನ್ನು (ಪಿಸಿಆರ್) ಹೈಕೋರ್ಟ್ ರದ್ದುಪಡಿಸಿದೆ.
Karnataka high court
ಹೈಕೋರ್ಟ್Google
Published on: 

ಬೆಂಗಳೂರು: ಭೂ ಅಕ್ರಮ ಮಂಜೂರಾತಿ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) (ಆಗಿನ ಕೋಚಿಮುಲ್) ನೇಮಕಾತಿ ಅಕ್ರಮ ಆರೋಪ ಸಂಬಂಧ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಇಸಿಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದಾಖಲಿಸಿದ್ದ ಖಾಸಗಿ ದೂರನ್ನು (ಪಿಸಿಆರ್) ಹೈಕೋರ್ಟ್ ರದ್ದುಪಡಿಸಿದೆ.

ಇಡಿಯ ಇಸಿಐಆರ್ (ಜಾರಿ ನಿರ್ದೇಶನಾಲಯ ಮಾಹಿತಿ ವರದಿ) ಮತ್ತು ಪಿಸಿಆರ್ ರದ್ದು ಕೋರಿ ಶಾಸಕ ಕೆ.ವೈ. ನಂಜೇಗೌಡ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಈ ಆದೇಶ ಮಾಡಿದೆ.

ಶಾಸಕ ಕೆ.ವೈ. ನಂಜೇಗೌಡ ಅವರ ಮೇಲೆ ಭೂಮಿ ಅಕ್ರಮ ಮಂಜೂರಾತಿ ಆರೋಪ ಸಂಬಂಧ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣ ಆಧರಿಸಿ ಇಡಿಯು ಇಸಿಐಆರ್ ದಾಖಲಿಸಿಕೊಂಡು, ನಂಜೇಗೌಡರ ಮನೆ ಮೇಲೆ ದಾಳಿ ಮಾಡಿತ್ತು. ನಂತರ 2023ರಲ್ಲಿ ನಡೆದ ಕೋಮುಲ್ ನೇಮಕಾತಿಯಲ್ಲಿ ಹಲವು ಅಕ್ರಮಗಳು ನಡೆದಿದೆ. ಅದರಲ್ಲಿ ನಂಜೇಗೌಡ ಅವರು ಭಾಗಿಯಾಗಿದ್ದಾರೆ. ಈ ಕುರಿತು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಬೇಕು ಎಂದು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಡಿ 2024ರ ಸೆ.11ರಂದು ಖಾಸಗಿ ದೂರು ದಾಖಲಿಸಿತ್ತು. ಇದರಿಂದ ಇಡಿಯ ಇಸಿಐಆರ್ ಮತ್ತು ಪಿಸಿಆರ್ ರದ್ದು ಕೋರಿ ನಂಜೇಗೌಡ ಅವರು ಹೈಕೋರ್ಟ್‌ಗೆ 2025ರಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಂಡಿಸಿ, ಅಕ್ರಮ ಭೂ ಮಂಜೂರಾತಿ ಸಂಬಂಧ ಪೊಲೀಸರ ಪ್ರಕರಣ ದಾಖಲಿಸಿದ್ದರು. ಅದನ್ನೇ ಆಧರಿಸಿ ಇಡಿ, ನಂಜೇಗೌಡರ ಮನೆ ಮೇಲೆ ಇಡಿ ದಾಳಿ ಮಾಡಿತ್ತು. ಈ ವೇಳೆ ಕೊಮುಲ್ ನೇಮಕಾತಿ ಹಗರಣ ನಡೆದಿದೆ. ಇದರಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದೇಳಿ ಇಡಿ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದೆ. ಆದರೆ, ಮೂಲ ಪ್ರಕರಣದಲ್ಲಿ ಪೊಲೀಸರ ಬಿ ರಿಪೋರ್ಟ್ ಸಲ್ಲಿಸಿದೆ. ಅದನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಿದೆ. ಇನ್ನೂ ಖಾಸಗಿ ದೂರು ದಾಖಲಿಸಲು ಇಡಿಗೆ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಪ್ರತಿಪಾದಿಸಿದ್ದರು.

ಈ ವಾದ ಪುರಸ್ಕರಿಸಿದ ಹೈಕೋರ್ಟ್, ನಂಜೇಗೌಡ ವಿರುದ್ದ ಇಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸಿದೆ. ನಂಜೇಗೌಡ ಅವರ ಪರ ವಕೀಲ ಸಿ.ಆರ್. ಮಹೇಂದ್ರ ಗೌಡ ಅವರ ವಕಾಲತ್ತು ವಹಿಸಿದ್ದರು.

ಕೆ.ವೈ. ನಂಜೇಗೌಡ ನಿವಾಸ ಸೇರಿ ಇತರೆ ಕಡೆ 2024ರಲ್ಲಿ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು ನಂಜೇಗೌಡ ಹಾಗೂ ಇತರರಿಗೆ ಸೇರಿದ ಒಟ್ಟು 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. 2023ರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿ. ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ನಡೆದಿದೆ. ಪ್ರಕರಣ ಸಂಬಂಧ ಈ ಮೌಲ್ಯದ ಆಸ್ತಿ ಜಪ್ತಿಗೊಳಿಸಲಾಗಿದೆ ಎಂದು 2025ರಲ್ಲಿ ಇಡಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.