ವಕೀಲರ ಪ್ರತಿಭಟನೆಯಲ್ಲಿ ಸಿಜೆ ಪೀಠದಲ್ಲಿ ಗದ್ದಲ: ನ್ಯಾಯಾಂಗ ನಿಂದನೆ ಪ್ರಕರಣ ದಾಖಲು: Karnataka high court

ವಕೀಲರ ಮೇಲಿನ ಹಿಂಸಾಚಾರ ಖಂಡಿಸಿ ಬೆಂಗಳೂರು ವಕೀಲರ ಸಂಘ ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಹೈಕೋರ್ಟ್ ಮಂಗಳವಾರ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.
Karnataka High court
ಕರ್ನಾಟಕ ಹೈಕೋರ್ಟ್‌Google
Published on: 

ಬೆಂಗಳೂರು: ವಕೀಲರ ಮೇಲಿನ ಹಿಂಸಾಚಾರ ಖಂಡಿಸಿ ಬೆಂಗಳೂರು ವಕೀಲರ ಸಂಘ ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಹೈಕೋರ್ಟ್ ಮಂಗಳವಾರ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ ವಕೀಲರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಂಗಳೂರು ವಕೀಲರ ಸಂಘಕ್ಕೆ ನೋಟಿಸ್ ಜಾರಿಗೊಳಿಸಿದೆ.

ಮೇಲ್ನೋಟಕ್ಕೆ, ಈ ವರ್ತನೆಯು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ನಾವು ಅಭಿಪ್ರಾಯಪಡುತ್ತೇವೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಲು ಯತ್ನಿಸಿದವರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಹೈಕೋರ್ಸ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಸಭಾಂಗಣದಲ್ಲಿ ಗದ್ದಲ ಸೃಷ್ಟಿಸಲು ಯತ್ನಿಸಿದ ವ್ಯಕ್ತಿಗಳನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ರಿಜಿಸ್ಟ್ರಿ ಗುರುತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ನ.19ಕ್ಕೆ ಪಟ್ಟಿ ಮಾಡಿದೆ.

ಕ್ಷಮಾಪಣಾ ಅಫಿಡವಿಟ್ ಸಲ್ಲಿಸಲು ಸೂಚನೆ

ನ್ಯಾಯಾಂಗ ನಿಂದನೆ ಆದೇಶ ಹೊರಡಿಸಿದ ಬಳಿಕ ಬೆಂಗಳೂರು ವಕೀಲರ ಸಂಘದ ಖಜಾಂಚಿ ಶ್ವೇತಾ ರವಿಶಂಕರ್ ಅವರು ಪೀಠದ ಮುಂದೆ ಹಾಜರಾಗಿ ಘಟನೆಯ ಕುರಿತು ವಿವರಣೆ ನೀಡಲು ಮುಂದಾದರು. ಆದರೆ, ನ್ಯಾಯಾಲಯದ ಸಭಾಂಗಣಕ್ಕೆ ಪ್ರವೇಶಿಸಿ ಗದ್ದಲ ಸೃಷ್ಟಿಸುವ ವಕೀಲರ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.

ಘಟನೆಯ ಸಂದರ್ಭದಲ್ಲಿ ಹಲವರು ಹಾಜರಿದ್ದರು. ವಕೀಲರ ಸಮೂಹದೊಂದಿಗೆ ಬಂದಿದ್ದ ವ್ಯಕ್ತಿಯನ್ನು ತಳ್ಳಲಾಗಿದೆ ಎಂದು ಶ್ವೇತಾ ರವಿಶಂಕರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಂಬಂಧಪಟ್ಟ ವ್ಯಕ್ತಿ ನ್ಯಾಯಾಲಯದ ವೇದಿಕೆಗೆ ಬಂದಿದ್ದಾನೆ ಎಂದು ಹೇಳಿತು.

ವಕೀಲರ ಪರವಾಗಿ ಕ್ಷಮೆಯಾಚಿಸಲು ಶ್ವೇತಾ ರವಿಶಂಕರ್ ಮುಂದಾದಾಗ, ಔಪಚಾರಿಕವಾಗಿ ಕ್ಷಮಾಪಣೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ ಎಂದು ಪೀಠ ಸೂಚಿಸಿತು.