ಪೋಕ್ಸೊ ಕಾಯ್ದೆಯ ದುರುಪಯೋಗ: ಪತ್ನಿಯ ವಿರುದ್ಧ ಕ್ರಮ ಜರುಗಿಸಬಹುದು ಎಂದ ಹೈಕೋರ್ಟ್:pocso act

ಪತ್ನಿ ತನ್ನ ಪತಿಯ ವಿರುದ್ಧ ಹೊರಿಸಿರುವ ಮೂರೂವರೆ ವರ್ಷದ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೊ ಪ್ರಕರಣಕ್ಕೆ ವೈದ್ಯಕೀಯ ಆಧಾರಗಳೇ ಇಲ್ಲ. ತಮ್ಮ ಕೌಟುಂಬಿಕ ವ್ಯಾಜ್ಯಕ್ಕೆ ದಂಪತಿಯು ಮಗುವನ್ನು ಕ್ರಿಮಿನಲ್ ಮೊಕದ್ದಮೆಯ ಸುಳಿಗೆ ಸಿಲುಕಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಪೋಕ್ಸೊ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
karnataka high court
ಹೈಕೋರ್ಟ್Google
Published on: 

ಬೆಂಗಳೂರು: ಪತ್ನಿ ತನ್ನ ಪತಿಯ ವಿರುದ್ಧ ಹೊರಿಸಿರುವ ಮೂರೂವರೆ ವರ್ಷದ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೊ ಪ್ರಕರಣಕ್ಕೆ ವೈದ್ಯಕೀಯ ಆಧಾರಗಳೇ ಇಲ್ಲ. ತಮ್ಮ ಕೌಟುಂಬಿಕ ವ್ಯಾಜ್ಯಕ್ಕೆ ದಂಪತಿಯು ಮಗುವನ್ನು ಕ್ರಿಮಿನಲ್ ಮೊಕದ್ದಮೆಯ ಸುಳಿಗೆ ಸಿಲುಕಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಪೋಕ್ಸೊ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ನಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದ ಪತಿ, ಅವರ ತಂದೆ, ತಾಯಿ ಮತ್ತು ಸಹೋದರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಒಂದು ವೇಳೆ ಪತಿ ಇಚ್ಛೆಪಟ್ಟಲ್ಲಿ ಪತ್ನಿಯ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.

ಪ್ರಕರಣದಲ್ಲಿ ವೈದ್ಯಕೀಯ ಆಧಾರಗಳೇ ಇಲ್ಲದಿರುವುದುರಿಂದ ‘‘ಹೆತ್ತ ತಾಯಿಯೊಬ್ಬರು ಹೆಣೆದ ಕಟ್ಟುಕಥೆ’ ಎಂದು ಬಣ್ಣಿಸಿದೆ.

ಕಸ್ಟಡಿ ಮತ್ತು ಭೇಟಿಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ದಾವೆದಾರರು ಕ್ರಿಮಿನಲ್ ಕಾನೂನನ್ನು ಪರೋಕ್ಷ ಸಾಧನವನ್ನಾಗಿ ಬಳಸಿಕೊಳ್ಳಲು ಸುತಾರಾಂ ಅವಕಾಶ ನೀಡಲಾಗದು. ಹಾಗಾಗಿ, ಈ ಪ್ರಕರಣದಲ್ಲಿ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ನ್ಯಾಯಿಕ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಆಗುತ್ತದೆ ಎಂದು ಹೇಳಿದೆ.

ಕಸ್ಟಡಿ ಭೇಟಿ ತಪ್ಪಿಸಲು ಕಟ್ಟುಕತೆ

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಬಗ್ಗೆ ಮಗುವಿನಿಂದ ಯಾವುದೇ ಸ್ವತಂತ್ರ ವಿವರಣೆಯಿಲ್ಲ. ತನಿಖೆಯ ಸಮಯದಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರೂ ಮಗುವಿನ ಯಾವುದೇ ಹೇಳಿಕೆ ದಾಖಲಿಸಿಲ್ಲ. ಪೋಕ್ಸೊ ಆರೋಪ ಕೇವಲ ತಾಯಿ ಬಾಯಿಯಿಂದ ಹೊರಹೊಮ್ಮಿದೆ. ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ಸಲುವಾಗಿ ಒಬ್ಬ ತಾಯಿ, ಕ್ಲಿನಿಕಲ್ ಸಂಶೋಧನೆಗಳನ್ನು ಅರ್ಥೈಸುತ್ತಾ ಇಂತಹ ಗುರುತರ ಆರೋಪವನ್ನು ಕುಟುಂಬದ ಸದಸ್ಯರೆಲ್ಲರ ವಿರುದ್ಧ ಮಾಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಉದ್ಗರಿಸಿದೆ.

ಕೋರ್ಟ್ ನಿರ್ದೇಶನದ ಪ್ರಕಾರ ಮಗುವಿನ ತಪಾಸಣೆ ನಡೆಸಿದ್ದ ಡಾ. ಪಿ. ಬಿಂದು ಮತ್ತು ಡಾ. ಅನುರಾಧಾ ಸದಾಶಿವಮೂರ್ತಿ ಅವರ ಪ್ರಮಾಣ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಲೈಂಗಿಕ ದೌರ್ಜನ್ಯ ಮಗುವಿನ ಮೇಲೆ ನಡೆದಿಲ್ಲ ಎಂಬುದನ್ನು ತೀರ್ಪಿನಲ್ಲಿ ದಾಖಲಿಸಿದೆ.

ತುರಿಕೆಯನ್ನೇ ಲೈಂಗಿಕ ದೌರ್ಜನ್ಯಕ್ಕೆ ತಿರುಗಿಸಿದ ತಾಯಿ

35 ವರ್ಷದ ಅರ್ಜಿದಾರ ಪತಿ (ಉದ್ಯಮಿ) ಮತ್ತು ಪ್ರತಿವಾದಿಯಾಗಿರುವ 33 ವರ್ಷದ ಪತ್ನಿ (ಗೃಹಿಣಿ) 2018ರ ಜುಲೈ 1ರಂದು ಮದುವೆಯಾಗಿದ್ದರು. ದಂಪತಿಗೆ 2022ರ ನ.14ರಂದು ಹೆಣ್ಣು ಮಗು ಜನಿಸಿತ್ತು. ಕೌಟುಂಬಿಕ ಮನಸ್ತಾಪ ಹೆಚ್ಚಾಗಿ 2024ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದರು. ಏತನ್ಮಧ್ಯೆ, ಪುಟ್ಟ ಮಗು ಅಪ್ಪನನ್ನು ಭೇಟಿಯಾಗಲು ಮತ್ತು ಸಮಯ ಕಳೆಯಲು ಪತ್ನಿ ನಿರಂತರವಾಗಿ ಅಡ್ಡಿಪಡಿಸುತ್ತಿದ್ದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರ ತಂದೆ ಮಗುವಿನ ಜತೆಗಿನ ಒಡನಾಟದ ಹಕ್ಕನ್ನು ಪ್ರತಿಪಾದಿಸಿ ಪಾಲನೆ ಮತ್ತು ಭೇಟಿ ಹಕ್ಕುಗಳನ್ನು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ನಿಗದಿತ ದಿನಗಳಂದು ನಿಗದಿಪಡಿಸಿದ ಸಮಯದಲ್ಲಿ ಮಗಳ ಜೊತೆ ಇರಲು ತಂದೆಗೆ ಅನುಮತಿ ನೀಡಿತ್ತು.

ಅದೊಂದು ದಿನ ಮಗು ತನಗೆ ಮಲ ವಿಸರ್ಜನೆ ಮಾಡಲು ತೊಂದರೆಯಾಗಿದೆ ಎಂಬ ಅಸ್ವಸ್ಥತೆಯನ್ನು ಕಸಿವಿಸಿಯಿಂದ ಅಸ್ಪಷ್ಟವಾಗಿ ತಾಯಿ ಬಳಿ ಅಲವತ್ತುಕೊಂಡಿತ್ತು. ತಾಯಿ ಪರೀಕ್ಷಿಸಿದಾಗ ಮಗುವಿನ ಗುಪ್ತಾಂಗದ ಸುತ್ತ ತುರಿಕೆಯಿಂದ ಚರ್ಮ ಕೆಂಪಗಾಗಿ ದದ್ದುಗಳು ಉಂಟಾಗಿದ್ದುದು ಕಂಡು ಬಂದಿತ್ತು. ಕೂಡಲೇ, ತಾಯಿ ಮಗುವನ್ನು ಆಸ್ಪತ್ರೆಗೆ ತೋರಿಸಿದ್ದರು.

ನಂತರ, ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ತನ್ನ ಗಂಡ, ಅತ್ತೆ, ಮಾವ ಮತ್ತು ಗಂಡನ ತಂಗಿಯ ವಿರುದ್ಧ ಠಾಣೆಗೆ ದೂರು ನೀಡಿದ್ದರು.