

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನೇಮಕವಾಗುವ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಿರುವುದು ತಾಂತ್ರಿಕ ಹುದ್ದೆಗಳ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) (ತಿದ್ದುಪಡಿ) ನಿಯಮಗಳು-2021ಕ್ಕೆ ತಿದ್ದುಪಡಿ ತಂದು 2026ರ ಅಂತಿಮ ಅಧಿಸೂಚನೆ ಪ್ರಕಟವಾಗಿದೆ. ತಾಂತ್ರಿಕ ಹುದ್ದೆಗಳಿಗೆ ಪತ್ರಿಕೆ-1ರ ಸಾಮಾನ್ಯ ಜ್ಞಾನ ಪರೀಕ್ಷೆಯು ಎಂದಿನಂತೆಯೇ ಮುಂದುವರಿಯಲಿದೆ. ಪತ್ರಿಕೆ-2ಅನ್ನು ಹುದ್ದೆಗಳಿಗೆ ಅನುಗುಣವಾಗಿ ಪ್ರಶ್ನೆಪತ್ರಿಕೆ ಸಿದ್ಧವಾಗಲಿದೆ.
ಈ ತಿದ್ದುಪಡಿಯಿಂದ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಸಾರಿಗೆ ಇಲಾಖೆಗಳಲ್ಲಿನ ಆರ್‌ಟಿಒ ಹುದ್ದೆಗಳು ಸೇರಿ ಇನ್ನಿತರೆ ನಿರ್ದಿಷ್ಟ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಿರುವ ಹುದ್ದೆಗಳ ಅಭ್ಯರ್ಥಿಗಳಿಗೆ ಪೂರಕವಾಗಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಬೇಕಾಗುತ್ತದೆ.
ತಾಂತ್ರಿಕ ಕೋರ್ಸ್‌ಗಳಿಗೆ ನಿರ್ದಿಷ್ಟ ಪತ್ರಿಕೆಗೆ ಪ್ರತ್ಯೇಕ ಪರೀಕ್ಷೆ ನಡೆಸಲು ಹಾಲಿ ನಿಯಮಗಳಲ್ಲಿ ಅವಕಾಶವಿಲ್ಲ. ಈ ಸಂಕೀರ್ಣತೆಯನ್ನು ಬಿಡಿಸಿ ಅನುವು ಮಾಡಲಾಗಿದೆ.
- ನೇಮಕಾತಿ ನಿಯಮಗಳು 1978ರ ಗ್ರೂಪ್ ‘ಸಿ’ ಹುದ್ದೆಗಳಿಗೆ ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನ ಮತ್ತು ಪತ್ರಿಕೆ-2ರಲ್ಲಿ ಕನ್ನಡ ಅಥವಾ ಇಂಗ್ಲಿಷ್ ವಿಷಯ ಪತ್ರಿಕೆ ಆಯ್ಕೆಗೆ ಅವಕಾಶ
- 2021ರಲ್ಲಿ ಪತ್ರಿಕೆ-1ಅನ್ನು ಉಳಿಸಿಕೊಂಡು ಪತ್ರಿಕೆ-2ರಲ್ಲಿ ಕೇವಲ ಕನ್ನಡ ಅಥವಾ ಇಂಗ್ಲಿಷ್‌ಗೆ ಬದಲಾಗಿ ಎಲ್ಲ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣ ಸೇರ್ಪಡೆ ಮಾಡಲಾಯಿತು
-2026ರಲ್ಲಿ ಪತ್ರಿಕೆ-2ರಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ.
- ಉದಾ- ಇಂಜಿನಿಯರಿಂಗ್/ಕೃಷಿ ಸೇರಿ ಇತರೆ ಹುದ್ದೆಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಬದಲಾಗಿ ತಾಂತ್ರಿಕ ವಿಷಯವನ್ನು ಒಳಗೊಂಡ ನಿರ್ದಿಷ್ಟ ಪ್ರಶ್ನೆಪತ್ರಿಕೆ ಇರಲಿದೆ. ತಾಂತ್ರಿಕ ಹುದ್ದೆ ಅಭ್ಯರ್ಥಿಗಳಿಗೆ ಅನುಕೂಲ
ರಾಜ್ಯದಲ್ಲಿ ವಿಧಾನ ಪರಿಷತ್ತು ಚುನಾವಣೆ ನೀತಿ ಸಂಹಿತೆ ಅ.30ಕ್ಕೆ ಮುಗಿಯಲಿದ್ದು, ಬಳಿಕ ನವೆಂಬರ್‌ನಲ್ಲಿ ಸುಮಾರು 4,500ಕ್ಕೂ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಪ್ರಕಟಿಸಲಿದೆ. ಗ್ರೂಪ್ ಸಿ ಹುದ್ದೆಗಳಾದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸಹಾಯಕ ಹುದ್ದೆಗಳನ್ನು ಹೊಂದಿರಲಿದೆ.
ಈಗಾಗಲೆ ಕೆಇಎ ಸದ್ಯದಲ್ಲಿಯೇ ಅಧಿಸೂಚನೆ ಪ್ರಕಟಿಸುವ ಮುನ್ಸೂಚನೆ ನೀಡಿರುವುದರಿಂದ ಪರೀಕ್ಷೆಗೆ ಹೆಚ್ಚಿನ ಸಮಯ ನೀಡುವುದಿಲ್ಲ. ಡಿಸೆಂಬರ್ ಅಂತ್ಯಕ್ಕೆ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.