

ಬೆಂಗಳೂರು: ಮುಂದಿನ 2029-30ರ ವೇಳೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ, ಹೆಣ್ಣಮಕ್ಕಳ ಉತ್ತೀರ್ಣ ದರ್ಜೆ, ಲಿಂಗ ಸಂವೇದನಾಶೀಲತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಶೈಕ್ಷಣಿಕ ನಾಯಕತ್ವನ್ನು ಪ್ರಗತಿಗೊಳಿಸುವ ಗುರಿ ಹೊಂದಿದೆ.
ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಫಲಿತಾಂಶ ಆಧಾರಿತ ಸಾಲ ಯೋಜನೆ’ ಹೆಸರಿನಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಬಿಡಿ) ನಿಂದ ಸಾಲ ಪಡೆಯುತ್ತಿದೆ. ಹಣ ಬಿಡುಗಡೆಗೆ 9 ವಿವಿಧ ಸೂಚಕಗಳನ್ನು ನೀಡಿದೆ. ಸಾಲ ಪಡೆದು ಯೋಜನೆ ಆರಂಭಿಸಿರುವ ಲಿತಾಂಶವನ್ನು ತಿಳಿದು ಯೋಜನೆ ಮುಂದುವರಿಸಲಿದೆ.
9 ಯೋಜನೆಗಳಿಗೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಡಿಎಸ್‌ಇಆರ್‌ಟಿ, ಕೆಎಸ್‌ಇಎಬಿ, ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯು ಇಲಾಖೆ ನಿರ್ದೇಶಕರು ಮತ್ತು ಎಸ್‌ಎಸ್‌ಕೆ ರಾಜ್ಯ ಯೋಜನಾ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸಂಬಂಧಪಟ್ಟ ವಿಭಾಗಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆ ಹೊರಡಿಸಿದೆ.
9 ಯೋಜನೆಗಳು
- 2030ರ ವೇಳೆಗೆ ಕೆಪಿಎಸ್‌ನಲ್ಲಿ ವ್ಯಾಸಂಗ ಮಾಡುವ 8ನೇ ತರಗತಿ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಲ್ಲಿ ಕನಿಷ್ಠ ಶೇ.3ರಷ್ಟು ಪ್ರಗತಿ ಕಂಡಿರಬೇಕು.
- 2030ರವೇಳೆಗೆ 10ರಿಂದ 11ನೇ ತರಗತಿ ವಿದ್ಯಾರ್ಥಿಗಳ ನಡುವಿನ ಪರಿವರ್ತನಾ ದರ ಕನಿಷ್ಠ ಶೇ.5ರಷ್ಟು ಹೆಚ್ಚಳ ಕಂಡಿರಬೇಕು.
- 2029ರ ವೇಳೆಗೆ ಕೆಪಿಎಸ್‌ನಲ್ಲಿ ಓದುವ 12ನೇ ತರಗತಿ ಹೆಣ್ಣುಮಕ್ಕಳ ಉತ್ತೀರ್ಣ ದರ್ಜೆ ಶೇ.3ರಷ್ಟು ಹೆಚ್ಚಳವಾಗಬೇಕು.
- 2030ರವೇಳೆಗೆ ಕನಿಷ್ಠ 500 ಕೆಪಿಎಸ್‌ನಲ್ಲಿ ಸುರಕ್ಷತೆ, ಲಿಂಗ ಸಂವೇದನಾಶೀಲತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕಲಿಕಾ ವಾತಾವರಣವನ್ನು ಸುಧಾರಿಸುವುದು
- 2030ರವೇಳೆಗೆ ಶಿಕ್ಷಕರು ಮತ್ತು ತರಗತಿ ಲೀಡರ್‌ಗಳ ವೃತ್ತಿಪರ ಸಾಮರ್ಥ್ಯವನ್ನು ವಿಷಯವಾರು ವಿಸ್ತರಿಸುವುದು. ವಿಷಯ ಜ್ಞಾನ, ಲಿಂಗ ಸಂವೇದನಾಶೀಲತೆ, ಸಾಮಾಜಿಕತೆಯನ್ನು ಒಳಗೊಂಡ ಶೈಕ್ಷಣಿಕ ಕೌಶಲ, ಶೈಕ್ಷಣಿಕ ನಾಯಕತ್ವ ಮತ್ತು ಶಾಲಾ ಆಡಳಿತವನ್ನು ಬಲಗೊಳಿಸುವುದು
- 2030ರವೇಳೆಗೆ 6ರಿಂದ 12ನೇ ತರಗತಿ ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ ಶಿಕ್ಷಣದ ಕಲಿಕೆಯಲ್ಲಿ ಪ್ರಗತಿ ಸಾಧಿಸುವುದು
- 2030ರವೇಳೆಗೆ 3ರಿಂದ 8ನೇ ತರಗತಿಯಲ್ಲಿ ಕಲಿಕಾ ಪ್ರಗತಿಯಲ್ಲಿನ ಮೌಲ್ಯಮಾಪನವನ್ನು ವಿಸ್ತರಿಸುವುದು
- 2030ರವೇಳೆಗೆ ಕೆಪಿಎಸ್ ಶಾಲೆ ಮಕ್ಕಳಲ್ಲಿ 21ನೇ ಶತಮಾನದ ಜೀವನ ಕೌಶಲಗಳು, ಲಿಂಗ ಸಂವೇದನಾಶೀಲತೆ ಮತ್ತು ಔದ್ಯೋಗಿಕ ಕೌಶಲಗಳ ಪ್ರಗತಿಯನ್ನು ವಿಸ್ತರಿಸುವುದು
- ಸಿಎಸ್‌ಆರ್ ಪಾಲುದಾರಿಕೆಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವ ಮೂಲಕ ಸಿಎಸ್‌ಆರ್ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡುವುದು