

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ನ ಸ್ಟ್ರೇ ವೇಕೆನ್ಸಿ-4 ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದ್ದು, ಏಳು ಸುತ್ತುಗಳ ಕೌನ್ಸೆಲಿಂಗ್ ನಂತರವೂ 191 ವೈದ್ಯಕೀಯ ಸೀಟು ಹಂಚಿಕೆಯಾಗದೆ ಉಳಿದಿವೆ.
ದಂತ ವೈದ್ಯಕೀಯ ಸೀಟು ಸಂಪೂರ್ಣ ಹಂಚಿಕೆಯಾಗಿದ್ದು, ಯಾವೊಂದು ಸೀಟು ಉಳಿಕೆಯಾಗಿಲ್ಲ. ಈ ಮೂಲಕ 2026ನೇ ಸಾಲಿನ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಪ್ರಕ್ರಿಯೆ ಕೊನೆಯಾದಂತಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಸ್ಟ್ರೇ ವೇಕೆನ್ಸಿ-2 ಸುತ್ತಿನ ನಂತರ ಭಾನುವಾರ ಒಟ್ಟು 273 ವೈದ್ಯಕೀಯ ಸೀಟು ಉಳಿದಿತ್ತು. ಬಳಿಕ ಆಪ್ಷನ್ಸ್ ಎಂಟ್ರಿ ದಾಖಲಿಸಲು ಕೊನೆ ಅವಕಾಶ ನೀಡಿ ಇಂದು ಎರಡು ಪ್ರತ್ಯೇಕ ಸ್ಟ್ರೇ ವೇಕೆನ್ಸಿ ಸುತ್ತಿನ ಕೌನ್ಸೆಲಿಂಗ್ ನಂತರ ಒಟ್ಟು 84 ವೈದ್ಯಕೀಯ ಸೀಟು ಹಂಚಿಕೆಯಾಗಿವೆ ಎಂದು ಅವರು ವಿವರಿಸಿದರು.
ಈ ವರ್ಷ ಒಟ್ಟಾರೆ ಏಳು ಸುತ್ತಿನ ಸೀಟು ಹಂಚಿಕೆ ಮಾಡಿ ದಾಖಲೆ ಬರೆದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಸಂಖ್ಯೆಯ ಸುತ್ತುಗಳಲ್ಲಿ ಸೀಟು ಹಂಚಿಕೆ ಮಾಡಿದ್ದು ಇದೇ ಮೊದಲು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.
ಎಂಸಿಸಿ ಆದೇಶಾನುಸಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇಂದು ಕೊನೆ ದಿನವಾದ ಕಾರಣ ಪೋಷಕರು/ಅಭ್ಯರ್ಥಿಗಳ ಕೋರಿಕೆ ಮೇರೆಗೆ ಒಂದೇ ದಿನ ಎರಡು ಪ್ರತ್ಯೇಕ ಸುತ್ತಿನ ಸೀಟು ಹಂಚಿಕೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಲಾಯಿತು ಎಂದು ಅವರು ವಿವರಿಸಿದ್ದಾರೆ.
ಬೆಳಗಿನ ಸುತ್ತಿನಲ್ಲಿ 62 ವೈದ್ಯಕೀಯ ಹಾಗೂ 6 ದಂತ ವೈದ್ಯಕೀಯ ಸೀಟು ಹಂಚಿಕೆಯಾದರೆ, ಸಂಜೆ ಸುತ್ತಿನಲ್ಲಿ 22 ವೈದ್ಯಕೀಯ ಮತ್ತು 5 ದಂತ ವೈದ್ಯಕೀಯ ಸೀಟು ಹಂಚಿಕೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಉಳಿಕೆ ಸೀಟುಗಳ ಹಂಚಿಕೆಗೆ ಎಂಸಿಸಿ ಮತ್ತೆ ಅವಕಾಶ ನೀಡಿದರೆ ಮುಂದುವರಿದ ಸುತ್ತುಗಳನ್ನು ಮಾಡಿ, ಸೀಟು ಹಂಚಿಕೆ ಮಾಡಲಾಗುವುದು ಎಂದು ಅವರು ವಿವರಿಸಿದರು.