ವಿದ್ಯಾದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ

ಜಮಖಂಡಿಯಲ್ಲಿ ನಡೆದ ಸಮಾರಂಭದಲ್ಲಿ ಲೇಖನಗಳ ಸಂಚಯ ಕೃತಿಯನ್ನು ಶಾಸಕ ಜಗದೀಶ ಗುಡಗುಂಟಿ ಲೋಕಾರ್ಪಣೆ ಮಾಡಿದರು. ಡಾ. ಸಂಗಮೇಶ ಮಟೋಳಿ, ಡಾ. ಎಚ್.ಬಿ. ಕೋಲ್ಕಾರ, ನಾಗೇಶ ಜೆ. ನಾಯಕ, ಕಾಡು ಮಾಳಿ, ಶಿವಾನಂದ ಶೆಲ್ಲಿಕೇರಿ, ಮ.ಕೃ. ಮೇಗಾಡಿ, ಸಂತೋಷ ತಳಕೇರಿ ಇತರರಿದ್ದರು.
ಜಮಖಂಡಿಯಲ್ಲಿ ನಡೆದ ಸಮಾರಂಭದಲ್ಲಿ ಲೇಖನಗಳ ಸಂಚಯ ಕೃತಿಯನ್ನು ಶಾಸಕ ಜಗದೀಶ ಗುಡಗುಂಟಿ ಲೋಕಾರ್ಪಣೆ ಮಾಡಿದರು. ಡಾ. ಸಂಗಮೇಶ ಮಟೋಳಿ, ಡಾ. ಎಚ್.ಬಿ. ಕೋಲ್ಕಾರ, ನಾಗೇಶ ಜೆ. ನಾಯಕ, ಕಾಡು ಮಾಳಿ, ಶಿವಾನಂದ ಶೆಲ್ಲಿಕೇರಿ, ಮ.ಕೃ. ಮೇಗಾಡಿ, ಸಂತೋಷ ತಳಕೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಗದೀಶ ಗುಡಗುಂಟಿ ಅನಿಸಿಕೆ
  • ಸೇವಾರತ್ನ ಪ್ರಶಸ್ತಿ ಪ್ರದಾನ, ಸಂಚಯ ಕೃತಿ ಲೋಕಾರ್ಪಣೆ

ಜಮಖಂಡಿ: ಶಿಕ್ಷಕರು ಮಕ್ಕಳಿಗೆ ನೀಡುವ ವಿದ್ಯಾದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೇಶದ ಮುಂಚೂಣಿ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಕರು ಮತ್ತು ಸಾಹಿತಿಗಳನ್ನು ಗೌರವದಿಂದ ನೋಡಬೇಕು. ಶಿಕ್ಷಕರು ಬದುಕಿನ ಜ್ಞಾನ, ಶಿಸ್ತು ಮತ್ತು ಉತ್ತಮ ದಾರಿಯನ್ನು ತೋರಿಸುವ ಮಾರ್ಗದರ್ಶಕರು ಅವರನ್ನು ಏಕವಚನದಲ್ಲಿ ಸಂಬೋಧಿಸಬಾರದು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ಜಿಲ್ಲಾ, ಜಮಖಂಡಿ ತಾಲೂಕು ಘಟಕಗಳು, ಸವದತ್ತಿ ಸಹೃದಯ ಸಾಹಿತ್ಯ ಪ್ರತಿಷ್ಠಾನ, ಸಾಹಿತ್ಯ ಸೌರಭ ವೇದಿಕೆ, ಬಸವ ಸಮಿತಿ ಹಾಗೂ ವೀರೇಶ್ವರ ಪ್ರಕಾಶನ ಜಮಖಂಡಿ ಇವುಗಳ ಆಶ್ರಯದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಹಾಗೂ ಡಾ. ಸಂಗಮೇಶ ಮಟೋಳಿ ವಿರಚಿತ ಲೇಖನಗಳ ಸಂಚಯ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸವದತ್ತಿ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ ಜೆ. ನಾಯಕ ಮಾತನಾಡಿ, ಪ್ರಶಸ್ತಿಗಳು ಪ್ರಾಮಾಣಿಕರನ್ನು ಹುಡುಕಿಕೊಂಡು ಬರುವುದು ಬಹಳ ಅಪರೂಪ. ಆದರೆ, ಅರ್ಜಿ ಆಹ್ವಾನಿಸದೆ ಪ್ರಾಮಾಣಿಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಪ್ರಶಸ್ತಿಗಳು ಹೆಗಲೇರಿದ ಮೇಲೆ ಶಿಕ್ಷಕರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮಕ್ಕಳಿಗೆ ಬೇಕಾಗುವ ಶಿಕ್ಷಕರಾಗಬೇಕು ಎಂದರು.
ಬೆಳಗಾವಿ ಆರ್‌ಪಿಡಿ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಬಿ. ಕೋಲ್ಕಾರ ಕೃತಿ ಪರಿಚಯಿಸುತ್ತ ಮಾತನಾಡಿ, ಗ್ರಾಮೀಣ ನೆಲದ ಅಸ್ಮಿತೆ, ಸ್ಥಳೀಯ ಐತಿಹ್ಯಗಳು, ಸಾಧಕರ ಸಾಧನೆಗಳು ಲೇಖನಗಳ ಸಂಚಯ ಕೃತಿಯ ಜೀವಾಳವಾಗಿವೆ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ನೈಪುಣ್ಯತೆ ಪಡೆದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಬೆನ್ನುತಟ್ಟುವ ಕಾರ್ಯ ಶಿಕ್ಷಕರಲ್ಲಿ ಜೀವನೋತ್ಸಾಹ ತುಂಬಲು ಸಹಕಾರಿಯಾಗಿದೆ ಎಂದರು.
ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಸೇರಿ ಒಟ್ಟು 64 ಜನ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು. ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ. ಸಂಗಮೇಶ ಮಟೋಳಿ ಪೂರ್ವಪರ ನುಡಿ ಹಂಚಿಕೊಂಡರು.
ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಮ.ಕೃ. ಮೇಗಾಡಿ, ರಮೇಶ ತಳವಾರ ಇತರರಿದ್ದರು.
ಮುಖ್ಯ ಶಿಕ್ಷಕ ಶಂಕರ ಲಮಾಣಿ ಪ್ರಾರ್ಥಿಸಿದರು, ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿದರು. ಶಿಕ್ಷಕರಾದ ಪ್ರಭು ಹಿಡಕ, ಚಿದಾನಂದ ಜಡಿಮಠ ನಿರೂಪಿಸಿದರು. ಪ್ರಾಚಾರ್ಯೆ ಚಂದ್ರಕಲಾ ಜನಗೌಡ ವಂದಿಸಿದರು.
ಚಿಕ್ಕಪಡಸಲಗಿ ಗುರು ಚಕ್ರವರ್ತಿ ಸದಾಶಿವ ಕರಡಿಮೇಳದೊಂದಿಗೆ ಪ್ರಶಸ್ತಿ ಪುರಸ್ಕೃತರು, ಅತಿಥಿಗಳು ಹಾಗೂ ಲೇಖನಗಳ ಸಂಚಯ ಕೃತಿಯನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net