ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಪ್ರಕಟ

ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು
ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು
Published on

ಪ್ರಮುಖ ಮುಖ್ಯಾಂಶಗಳು

  • ರೆಂಜಾಳ ರಾಮಕೃಷ್ಣ ರಾವ್ ಸೇರಿ ಐವರಿಗೆ ಗೌರವ ಪ್ರಶಸ್ತಿ
  • ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ
  • ಡಿ. 21ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ವಿವಿಧ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ರೆಂಜಾಳ ರಾಮಕೃಷ್ಣ ರಾವ್ ಸೇರಿ ಐವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಗರದ ಕನ್ನಡ ಭವನದಲ್ಲಿ ಬುಧವಾರ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಳಿಸಿದರು.
ಬೆಳ್ತಂಗಡಿಯ ರೆಂಜಾಳ ರಾಮಕೃಷ್ಣ ರಾವ್ (ತೆಂಕುತಿಟ್ಟು), ಉತ್ತರ ಕನ್ನಡ ಜಿಲ್ಲೆಯ ವಿಷ್ಣು ಆಚಾರಿ ಬಳಕೂರು (ಬಡಾಬಡಗು), ಬಂಟ್ವಾಳದ ಡಿ.ಮನೋಹರ್ ಕುಮಾರ್ (ತೆಂಕುತಿಟ್ಟು), ಉಡುಪಿಯ ಮುರಲಿ ಕಡೆಕಾರ್ (ಬಡಗುತಿಟ್ಟು), ರಾಮನಗರದ ರಮೇಶ್ (ಮೂಡಲಪಾಯ) ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು, ಲಕ ಒಳಗೊಂಡಿದೆ.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ 10 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ದಾಸನಡ್ಕ ರಾಮ ಕುಲಾಲ್ (ಕಾಸರಗೋಡು), ರಾಜೀವ ಶೆಟ್ಟಿ ಹೊಸಂಗಡಿ (ಕುಂದಾಪುರ), ದಾಸಪ್ಪಗೌಡ ಗೇರುಕಟ್ಟೆ (ಬೆಳ್ತಂಗಡಿ), ಶ್ರೀನಿವಾಸ್ ಸಾಲ್ಯಾನ್ (ಮಂಗಳೂರು), ಸದಾಶಿವ ಕುಲಾಲ್ (ವೇಣೂರು), ಬೆಳ್ಳಾರೆ ಮಂಜುನಾಥ ಭಟ್ (ಪುತ್ತೂರು), ಕೇಶವ ಶಕ್ತಿನಗರ (ದಕ್ಷಿಣ ಕನ್ನಡ), ಲಕ್ಷ್ಮಣಗೌಡ ಬೆಳಾಲ್ (ದಕ್ಷಿಣ ಕನ್ನಡ), ಸಣ್ಣ ಮಲ್ಲಯ್ಯ (ಮೈಸೂರು), ಎ.ಜಿ.ನಾಗರಾಜು (ತುಮಕೂರು) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಲಕ ಹೊಂದಿದೆ.
2025ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮುಂದಿನ ದಿನಗಳಲ್ಲಿ ಪುರಸ್ಕೃತರ ಹೆಸರು ಘೋಷಣೆ ಮಾಡಲಾಗುವುದು, ಉಡುಪಿಯ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಡಿ.21ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವರಾಮ ಶೆಟ್ಟಿ ತಿಳಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತ, ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಿನ್ಯಾ, ವಿನಯ ಕುಮಾರ್ ಶೆಟ್ಟಿ, ಸತೀಶ ಅಡಪ ಸಂಕಬೈಲ್ ಇದ್ದರು.

2024ನೇ ಸಾಲಿನ ಪುಸ್ತಕ ಬಹುಮಾನ

ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ (ಉ.ಕನ್ನಡ ಜಿಲ್ಲೆ), ಕೆರೆಮನೆ ಶಿವಾನಂದ ಹೆಗಡೆ ಅವರ ‘ಪುಸ್ತಕ ಆಟದ ಮೇಳ’ (ಉ.ಕನ್ನಡ ಜಿಲ್ಲೆ) ಮತ್ತು ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಸಂಪಾದಕ ಪುಸ್ತಕ ‘ದೊಡ್ಡ ಸಾಮಗರ ನಾಲ್ಮೊಗ’ (ದಕ್ಷಿಣ ಕನ್ನಡ ಜಿಲ್ಲೆ) ಪುಸ್ತಕಗಳು 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿಯು 25 ಸಾವಿರ ನಗದು ಮತ್ತು ಲಕ ಹೊಂದಿದೆ.

ದತ್ತಿನಿಧಿ ಪ್ರಶಸ್ತಿ:

2025ನೇ ಸಾಲಿನ ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಕುಂದಾಪುರದ ದೇವದಾಸರಾವ್ ಕೊಡ್ಲಿ (ಬಡಗುತಿಟ್ಟು) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಲಕ ಒಳಗೊಂಡಿದೆ.

ಯಕ್ಷಗಾನವು ಸಂಗೀತ, ನೃತ್ಯ, ಅಭಿನಯ ಒಳಗೊಂಡಂತೆ ವಿವಿಧ ಕಲೆಗಳ ಸಂಗಮವಾಗಿದೆ. ಕೇರಳದಲ್ಲಿ ಕಥಕ್ಕಳಿ ಕಲೆಗೆ ರಾಜ್ಯ ಕಲೆಯ ಮನ್ನಣೆ ದೊರೆತಿದೆ. ಅದೇ ರೀತಿ ಯಕ್ಷಗಾನಕ್ಕೆ ರಾಜ್ಯ ಕಲೆಯ ಮಾನ್ಯತೆ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರೂ ಕ್ಷೇತ್ರಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net