ದೇವರನ್ನು ಭೀತಿ ಬಿಟ್ಟು ಪ್ರೀತಿಯಿಂದ ಆರಾಧಿಸಿ

ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀ ಪ್ರವಚನ
Shri Raghaveshwara Bharati Swamiji blessed the couple, MP Tejasvi Surya and Shivashree, at the concluding ceremony of the 'Navaratra Namasya' event.
ಸಂಸದ ತೇಜಸ್ವಿ ಸೂರ್ಯ - ಶಿವಶ್ರೀ ದಂಪತಿಗಳನ್ನು ನವರಾತ್ರ ನಮಸ್ಯ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವದಿಸಿದರು.
Published on: 

ಬೆಂಗಳೂರು : ದೇವರನ್ನು ಪ್ರೀತಿಯಿಂದ ಆರಾಧಿಸಬೇಕು ಹೊರತು ಭೀತಿಯಿಂದಲ್ಲ. ಪ್ರೀತಿಯಿಂದ ಮಾಡಿದ ಪೂಜೆಗೆ ಅರ್ಥ ಬರುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗಿರಿನಗರದ ಶಾಖಾಮಠದಲ್ಲಿ ನಡೆದ ‘ನವರಾತ್ರ ನಮಸ್ಯಾ’ ಸಮಾರೋಪ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪ್ರತಿಯೊಬ್ಬರಲ್ಲೂ ದೇವರ ಸಾನ್ನಿಧ್ಯವಿದ್ದು, ನಮ್ಮ ಹೃದಯ ಮಂದಿರದಲ್ಲಿರುವ ದೇವರನ್ನು ಅಂತರ್ಮುಖಿಗಳಾಗಿ ನೋಡಲು ಸೂಕ್ತ ಕಾಲ ಈ ನವರಾತ್ರಿ. ಹೋಮ, ಪಾರಾಯಣ, ದೀಪ ನಮಸ್ಕಾರ ಎಲ್ಲವೂ ನಮ್ಮೊಳಗಿರುವ ದೇವಿಯ ಸಾನ್ನಿಧ್ಯವನ್ನು ಕಾಣಲು ಇರುವ ಉಪಕರಣಗಳು. ನವರಾತ್ರಿಯಲ್ಲಿ ಉಪವಾಸದ ಆಚರಣೆಯಿಂದ ಆರೋಗ್ಯ ವೃದ್ಧಿಯನ್ನು ಕಾಣಬಹುದು. ಇದು ನವರಾತ್ರಿ ಆಚರಣೆಯ ಬಾಹ್ಯ ಫಲವಾಗಿದೆ. ‘ನವ’ ಎಂಬುದು ಹೊಸಕಾಲ ಎಂಬುದಾಗಿಯೂ ಅರ್ಥೈಸಬಹುದು. ದೇವಿ ಪಾರಾಯಣ ಎಂಬುದು ಕೇವಲ ಕಾಟಾಚಾರದ ಕ್ರಮವಾಗಬಾರದು. ಸಪ್ತಶತೀ, ಲಲಿತೋಪಾಖ್ಯಾನಗಳಲ್ಲಿ ದೇವಿಯ ಅವತಾರದ ವಿಶೇಷತೆಗಳಿದ್ದು, ಸುದೀರ್ಘ ಕಾಲ ಮನಸ್ಸಿನಲ್ಲಿ ದೇವರ ಸ್ಮರಣೆ ಮಾಡಲು ಪಾರಾಯಣ ಸಹಕಾರಿಯಾಗಲಿದೆ ಎಂದು ಶ್ರೀಗಳು ವಿವರಿಸಿದರು.

ಸಂಸದ ತೇಜಸ್ವಿ ಸೂರ್ಯ, ಗಾಯಕಿ ಶಿವಶ್ರೀ ದಂಪತಿಗಳು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್‌ಭಟ್, ಹಿರಿಯ ನ್ಯಾಯವಾದಿ ರಾಜಶೇಖರ ಹಿಲ್ಯಾರ್, ಹಿರಿಯ ಗಾಯಕ ಗರ್ತಿಕೆರೆ ರಾಘಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದುಕೊಂಡರು. ಪ್ರಧಾನ ಸಂಚಾಲಕ ರಮೇಶ ಹೆಗಡೆ, ಸಂಚಾಲಕ ದೀಪಕ ಹೆಗಡೆ ಗೋಳಿಕೈ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

In the context of Navaratri, the idol of Goddess Rajarajeshwari, which had been installed at the Shrimatha, was taken in a procession along the main roads of Girinagar.
ನವರಾತ್ರಿ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಪ್ರತಿಷ್ಠಾಪಿಸಲಾಗಿದ್ದ ರಾಜರಾಜೇಶ್ವರಿ ದೇವರ ಮೂರ್ತಿಯನ್ನು ಗಿರಿನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net