ಸಿಂಧನೂರು: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ 31 ರಿಂದ 56ನೇ ಉಪಕಾಲುವೆಗಳ ದುರಸ್ತಿಗೆ ಈ ವರ್ಷವೂ ಅನುದಾನ ಬಂದಿಲ್ಲ. ಇದರಿಂದ ನಾಲೆಗಳು ಮತ್ತಷ್ಟು ಹಾಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರು ಹರಿಯುವುದೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ತಾಲೂಕಿನಲ್ಲಿ 66 ಸಾವಿರ ಹೆಕ್ಟೇರ್ ಪ್ರದೇಶ ಸೇರಿ ಟೇಲೆಂಡ್ ಭಾಗದ 15 ಸಾವಿರ ಎಕರೆ ಪ್ರದೇಶದಲ್ಲಿ ರೈತರು ತುಂಗಭದ್ರಾ ಎಡದಂಡೆ ನಾಲೆ ನೀರು ನಂಬಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಾರೆ. ನೀರಾವರಿ ಪ್ರದೇಶದಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಪೂರ್ಣ ಪ್ರಮಾಣದ ಭತ್ತ ಬೆಳೆಯಲಾಗುತ್ತದೆ.
ಟೇಲೆಂಡ್‌ನಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ ಜೋಳ, ತೊಗರಿ, ಹತ್ತಿ ಬೆಳೆಯಲಾಗುತ್ತದೆ. ತಾಲೂಕು ವ್ಯಾಪ್ತಿಯಲ್ಲಿ 31ನೇ ಕಾಲುವೆಯಿಂದ 58ರವರೆಗೆ ಉಪಕಾಲುವೆಗಳಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ.
ಕಳೆದ ಆರೇಳು ವರ್ಷಗಳಿಂದ ಉಪಕಾಲುವೆ ದುರಸ್ತಿಗೆ ಬಿಡಿಗಾಸು ಅನುದಾನವಿಲ್ಲ. ಬಹುತೇಕ ಉಪಕಾಲುವೆಗಳೆಲ್ಲ ಹಾಳಾಗುತ್ತಿದ್ದು, ಮೇಲ್ಭಾಗದಲ್ಲಿ ಯಥೇಚ್ಛವಾಗಿ ನೀರು ಹರಿಯುತ್ತಿದೆ. ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಯದೆ, ರೈತರು ಬೆಳೆ ಕಳೆದುಕೊಳ್ಳುವ ಸನ್ನಿವೇಶಕ್ಕೆ ಸಿಲುಕಿದ್ದು, ಆರ್ಥಿಕ ನಷ್ಟಕ್ಕೆ ಒಳಗಾಗುವಂತಾಗಿದೆ. ಉಪಕಾಲುವೆಗಳ ದುರಸ್ತಿಗೆ ಯಾವಾಗ ಕಾಲ ಕೂಡಿಬರುವುದೋ ಎನ್ನುವ ಚಿಂತೆ ರೈತರದ್ದಾಗಿದೆ.
ಕೆಳಭಾಗಕ್ಕಿಲ್ಲ ನೀರು
ಕೆಲ ವರ್ಷಗಳಿಂದ ಉಪಕಾಲುವೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿಲ್ಲ. ಈ ವರ್ಷವಾದರೂ ಪರಿಸ್ಥಿತಿ ಭಿನ್ನವೇನಿಲ್ಲ. ಉಪಕಾಲುವೆಗಳ ಸ್ಥಿತಿ ಗಂಭೀರವಾಗಿದ್ದು, ನೀರು ಹರಿಸಿಕೊಳ್ಳಲು ರೈತರಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲೂ 36 ಮತ್ತು 54ನೇ ಉಪಕಾಲುವೆ ಅತಿ ಹೆಚ್ಚು ಭೂಮಿಗೆ ನೀರುಣಿಸುತ್ತಿದ್ದು, ಮೇಲ್ಭಾಗದಲ್ಲಿ ನಾಲೆ ಹಾಳಾಗಿರುವುದರಿಂದ ಕೆಳ ಭಾಗಕ್ಕೆ ನೀರು ಬಾರದೆ, ಮೇಲ್ಭಾಗದಲ್ಲಿಯೇ ವ್ಯರ್ಥವಾಗಿ ಹರಿಯುತ್ತಿದೆ. ಕಾಲುವೆ ವ್ಯಾಪ್ತಿಯ ಜಮೀನುಗಳ ರೈತರು ನೀರಿಗಾಗಿ ಹೋರಾಟ ನಡೆಸುವುದು ನಿಂತಿಲ್ಲ. ಭತ್ತ ನಾಟಿ, ಕಾಳು ತುಂಬುವ ಹಂತದಲ್ಲಿ ನೀರು ಹರಿಸಿಕೊಳ್ಳಲು ಕಸರತ್ತು ಮಾಡಬೇಕಿದೆ. ಕೆಳ ಭಾಗಕ್ಕೆ ನೀರು ಸಮರ್ಪಕವಾಗಿ ಹರಿಸಲು ಒತ್ತಾಯ ಮಾಡುತ್ತಿದ್ದರೂ ಸ್ಪಂದನೆ ಇಲ್ಲವಾಗಿದೆ.
ಅರ್ಧದಷ್ಟು ಹುದ್ದೆ ಖಾಲಿ
ನೀರಾವರಿ ಇಲಾಖೆಯಲ್ಲಿ ಐದು ಎಇಇ ಹುದ್ದೆ ಮಂಜೂರಾಗಿದ್ದು, ಮೂವರು ಕೆಲಸ ಮಾಡುತ್ತಿದ್ದಾರೆ. ಸಹಾಯಕ ಇಂಜಿನಿಯರ್ 22 ಹುದ್ದೆ ಪೈಕಿ, 9 ಜನ ಇದ್ದಾರೆ. ಕಿರಿಯ ಇಂಜಿನಿಯರ್ 20ರಲ್ಲಿ 10 ಜನ, ರೆವಿನ್ಯೂ ಇನ್ಸ್‌ಪೆಕ್ಟರ್ 4 ಹುದ್ದೆ ಖಾಲಿ ಇವೆ. ಇಲಾಖೆಯ 109 ಮಂಜೂರಾತಿ ಹುದ್ದೆಗಳಲ್ಲಿ 64 ಜನ ಕಾರ್ಯನಿರ್ವಹಿಸುತ್ತಿದ್ದು, 45 ಹುದ್ದೆ ಖಾಲಿ ಇವೆ.