ವೈನ್ ತಯಾರಿಕೆ ಪರವಾನಗಿ ಅವಧಿ ಐದು ವರ್ಷಕ್ಕೆ ಹೆಚ್ಚಳ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ವೈನ್ ಮತ್ತು ಫೋರ್ಟಿಫೈಡ್ ವೈನ್ ಸಂಬಂಧಿತ ಅಬಕಾರಿ ನಿಯಮಗಳಲ್ಲಿ ಇಲಾಖೆ ಮಹತ್ವದ ತಿದ್ದುಪಡಿ ಮಾಡಿದೆ. ವೈನ್ ಚಿಲ್ಲರೆ ಮಾರಾಟದ ಗುತ್ತಿಗೆ, ದ್ರಾಕ್ಷಿಯಿಂದ ಫೋರ್ಟಿಫೈಡ್ ವೈನ್ ತಯಾರಿಕೆ ಮತ್ತು ವೈನ್ ತಯಾರಿಕೆ ಪರವಾನಗಿಗಳ ಅವಧಿಯನ್ನು ಒಂದು ವರ್ಷದಿಂದ 5 ಅಬಕಾರಿ ವರ್ಷಗಳಿಗೆ ಹೆಚ್ಚಿಸಲಾಗಿದೆ.
ಈ ಸಂಬಂಧ ಮೂರು ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ.
ತಿದ್ದುಪಡಿ ನಿಯಮಗಳಲ್ಲಿ ‘ಅಬಕಾರಿ ವರ್ಷ’ದ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಇನ್ನು ಮುಂದೆ ಪ್ರತಿ ವರ್ಷದ ಜುಲೈ 1ರಿಂದ ಪ್ರಾರಂಭವಾಗಿ ಮುಂದಿನ ವರ್ಷದ ಜೂನ್ 30ರವರೆಗೆ ಇರುವ ಅವಧಿಯನ್ನು ಒಂದು ಅಬಕಾರಿ ವರ್ಷ ಎಂದು ಪರಿಗಣಿಸಲಾಗುತ್ತದೆ. ಈ ಸ್ಪಷ್ಟನೆಯು ತೆರಿಗೆ ಮತ್ತು ಶುಲ್ಕ ಪಾವತಿಯ ಗೊಂದಲಗಳನ್ನು ನಿವಾರಿಸಲಿದೆ.
ಪ್ರತಿ ವರ್ಷ ಪ್ರಚಲಿತ ದರಗಳಲ್ಲಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಶುಲ್ಕ ಪಾವತಿಸುವ ಷರತ್ತಿನ ಮೇಲೆ ಈ 5 ವರ್ಷಗಳ ಅವಧಿ ಅನ್ವಯವಾಗುತ್ತದೆ. ರಿಟೇಲ್ ವೆಂಡ್ ನಿಯಮಗಳಲ್ಲಿ ವರ್ಷ ಬದಲು ಅಬಕಾರಿ ವರ್ಷ ಎಂಬ ಪದ ಬಳಕೆಯಾಗುವಂತೆ ತಿದ್ದುಪಡಿ ಮಾಡಲಾಗಿದೆ.
ಸನ್ನದು ಅವಧಿ 5 ವರ್ಷಗಳಿದ್ದರೂ, ಪರವಾನಗಿದಾರರು ಪ್ರತಿ ವರ್ಷ ಪ್ರಚಲಿತದಲ್ಲಿರುವ ದರಗಳಂತೆ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಶುಲ್ಕ ಪಾವತಿಯಲ್ಲಿ ವಿಳಂಬವಾದರೆ ಅಥವಾ ನಿಯಮ ಉಲ್ಲಂಘನೆಯಾದರೆ ಸನ್ನದು ರದ್ದಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net