ರಾಹುಲ್ ಗಾಂಧಿಯದ್ದು ನೋ ಡಾಟಾ, ಓನ್ಲಿ ಗಲಾಟ: ಸಚಿವ ಜಾರಕಿಹೊಳಿ ಜೊತೆ ಚರ್ಚಿಸುವಂತೆ ಸವಾಲ್​ ಹಾಕಿದ್ದೇಕೆ ಸಂಬಿತ್ ಪಾತ್ರಾ? | Sambit Patra

ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸಂಬಿತ್ ಪಾತ್ರಾ
ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸಂಬಿತ್ ಪಾತ್ರಾ
Published on: 

ಬೆಂಗಳೂರು: ಎಸ್ಐಆರ್ ವಿಷಯದಲ್ಲಿ ಕಾಂಗ್ರೆಸ್ ದೇಶದಾದ್ಯಂತ ಜನರಲ್ಲಿ ಗೊಂದಲ ಮೂಡಿಸುತ್ತಿದ್ದು, ಅರಾಜಕತೆ ಹಬ್ಬಿಸಲು ಯತ್ನಿಸುತ್ತಿದೆ. ಆದರೆ ಬಿಜೆಪಿ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಹೇಗೆ ಪಾರದರ್ಶಕವಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಡಾ. ಸಂಬಿತ್ ಪಾತ್ರಾ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನೋ ಡಾಟಾ... ಓನ್ಲಿ ಗಲಾಟ...

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೈಖರಿಯನ್ನು ವ್ಯಂಗ್ಯವಾಡಿದ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಅವರಿಗೆ ದೇಶದ ಆಗುಹೋಗುಗಳ ಬಗ್ಗೆ ಯಾವುದೇ ಅಂಕಿ-ಅಂಶ ಅಥವಾ ಮಾಹಿತಿ ಇರುವುದಿಲ್ಲ. ಅವರದ್ದು ನೋ ಡಾಟಾ, ಓನ್ಲಿ ಗಲಾಟ ಎಂಬ ನೀತಿಯಾಗಿದೆ. ದೇಶದಲ್ಲಿ ಏನು ನಡೆಯುತ್ತಿದೆ ಎಂಬ ತಿಳಿವಳಿಕೆಯೇ ಇಲ್ಲದೆ ಬೀದಿಯಲ್ಲಿ ಅರಾಜಕತೆ ಸೃಷ್ಟಿಸುತ್ತಾರೆ. ಇಂತಹವರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ಮಾಡಬೇಕು ಎಂದು ಬಯಸುತ್ತಾರೆ ಎಂದು ಲೇವಡಿ ಮಾಡಿದರು. ವಿಪಕ್ಷ ನಾಯಕರಾದವರು ಸಂಸತ್ತಿನಲ್ಲಿ ಐದಾರು ನಿಮಿಷವೂ ಶಾಂತಿಯಿಂದ ಕೂರುವುದಿಲ್ಲ. ಒಳಗೆ ಬರುವುದು, ಹೊರಗೆ ಹೋಗುವುದನ್ನೇ ಮಾಡುತ್ತಾರೆ. ಇದನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಇದಕ್ಕೆ ಬೇಕಿದ್ದರೆ ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಅವರು ದೂರಿದರು.

ಸ್ವಪಕ್ಷೀಯ ಸಚಿವರ ಜೊತೆ ರಾಹುಲ್​ ಚರ್ಚೆ ಮಾಡ್ಲಿ!

ಇಂಡಿಯಾ ಒಕ್ಕೂಟದ ಹಿರಿಯ ನಾಯಕರುಗಳ ನಡುವೆಯೇ ಹೊಂದಾಣಿಕೆಯಿಲ್ಲ ಎಂದು ಆರೋಪಿಸಿದ ಪಾತ್ರಾ, ಅರವಿಂದ್ ಕೇಜ್ರಿವಾಲ್ ತಮ್ಮ ಗೆಳೆಯ ಎನ್ನುವ ರಾಹುಲ್, ಪಂಜಾಬ್‌ನ ಆಪ್ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎನ್ನುತ್ತಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ಸರ್ಕಾರ ಭ್ರಷ್ಟಾಚಾರದಲ್ಲಿದೆ, ಹೀಗಾಗಿ ಬಿಜೆಪಿ ಗೆಲ್ಲಲಿದೆ ಎಂದಿದ್ದರು. ಅವರು ಹೇಳಿದಂತೆಯೇ ಫಲಿತಾಂಶ ಬಂದಿದ್ದಕ್ಕೆ ಅವರಿಗೆ ಧನ್ಯವಾದಗಳು. ಕೇಜ್ರಿವಾಲ್ ಮತ್ತು ಮಮತಾ ತಮ್ಮೊಂದಿಗಿದ್ದಾರೋ ಇಲ್ಲವೋ ಎಂಬುದನ್ನು ರಾಹುಲ್ ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಎಸ್​ಐಆರ್ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ, ಮೃತಪಟ್ಟ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಸಹಜ ಪ್ರಕ್ರಿಯೆ ಎಂದು ಸ್ವತಃ ಕಾಂಗ್ರೆಸ್​ ಸಚಿವರೇ ಹೇಳಿದ್ದಾರೆ, ಈಗ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬಂದು ಮೊದಲು ತಮ್ಮದೇ ಪಕ್ಷದ ಸಚಿವರ ಜೊತೆ ಚರ್ಚಿಸಲಿ ಎಂದು ಸಲಹೆ ನೀಡಿದರು.

ರಾಹುಲ್ ಗಾಂಧಿ ದುರಂಹಕಾರ....

ದೆಹಲಿ ಪ್ರತಿಭಟನೆ ವೇಳೆ ನಡೆದ ಘಟನೆಯನ್ನು ಪ್ರಸ್ತಾಪಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪಾತ್ರ, ದೆಹಲಿಯಲ್ಲಿ ತಮ್ಮದೇ ಪಕ್ಷದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ರಾಹುಲ್ ಗಾಂಧಿ ಪಕ್ಕಕ್ಕೆ ತಳ್ಳಿದ್ದರು. ಇದರಿಂದ ಡಿಕೆಶಿ ಅವರು ಕಣ್ಣೀರು ಹಾಕಿದ್ದರು. ಗಾಂಧಿ ಕುಟುಂಬದ ಈ ದುರಹಂಕಾರದ ಬಗ್ಗೆ ಡಿಕೆಶಿ ಅವರೇ ಪತ್ರಿಕಾಗೋಷ್ಠಿ ನಡೆಸಿ ಸತ್ಯ ಹೇಳಬೇಕಿತ್ತು ಎಂದರು.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿದ್ದರೂ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರು ನಕಲಿ ಮತದಾನ ಮಾಡಿದ ಆರೋಪ ಕೇಳಿಬಂದಿತ್ತು. ರಾಜ್ಯದಲ್ಲಿ ಬಸ್ ದರ, ಹಾಲಿನ ಬೆಲೆ ಏರಿಕೆಯಾಗಿದ್ದು, ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಟಕವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವೋಟ್ ಬ್ಯಾಂಕ್​ಗೆ ತಡೆ!

ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ವಿವರಿಸಿದ ಪಾತ್ರಾ, ಬೋಗಸ್ ಮತದಾನ ಮಾಡಲು ಬಯಸಿರುವ ಕೈ ನಾಯಕರು, ಮೃತಪಟ್ಟವರ ಹೆಸರೂ ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಎಸ್​ಐಆರ್​ ವೇಳೆ 3 ಕೋಟಿ ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಅದರಲ್ಲಿ ಹಲವರು ಉತ್ತರಿಸಿಲ್ಲ. ಇವರೆಲ್ಲ ಅಕ್ರಮ ವಲಸಿಗರು ಎಂಬುದು ಸಾಬೀತಾಗಿದೆ. ಮಮತಾ ಬ್ಯಾನರ್ಜಿ ಅವರಿಗೆ ಆಧಾರ್ ಹಾಗೂ ಪ್ರಿಯಾಂಕಾ ಗಾಂಧಿ ರೇಷನ್ ಕಾರ್ಡ್ ಕೊಡಿಸಿದ್ದರು. ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ತೆರವುಗೊಳಿಸುತ್ತಿರುವುದರಿಂದ ಕಾಂಗ್ರೆಸ್‌ನ ವೋಟ್ ಬ್ಯಾಂಕ್‌ಗೆ ತಡೆಯಾಗಿದೆ. ಪ್ರಧಾನಿ ಮೋದಿ ಅವರು ನಿಜವಾದ ಭಾರತೀಯರ ಹಿತರಕ್ಷಣೆಗೆ ಬದ್ಧರಾಗಿದ್ದಾರೆ ಎಂದರು.

ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸುವುದು ಬಿಜೆಪಿಯ ಜವಾಬ್ದಾರಿಯಾಗಿದ್ದು, ಮತಕಳ್ಳತನದ ಬಗ್ಗೆ ಕಾಂಗ್ರೆಸ್ ಬಳಿ ನಿಜವಾದ ಸಾಕ್ಷ್ಯಗಳಿದ್ದರೆ ಮಾಧ್ಯಮಗಳ ಮುಂದೆ ಗಿಮಿಕ್ ಮಾಡುವ ಬದಲು ಚುನಾವಣಾ ಆಯೋಗ ಅಥವಾ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿ ಎಂದು ಸಂಸದ ಸಂಬಿತ್​ ಪಾತ್ರ ಸವಾಲು ಹಾಕಿದರು.