

ಪಿರಿಯಾಪಟ್ಟಣ:
ಆನೆಗಳು ಪ್ರಕೃತಿಯ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹುಣಸೂರು ವನ್ಯಜೀವಿ ವಲಯದ ಆರ್‌ಎಫ್‌ಒ ಜಿ.ಮಂಜು ತಿಳಿಸಿದರು.
ವಿಶ್ವ ಆನೆ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆ ವತಿಯಿಂದ ಭೀಮನಕಟ್ಟೆ ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಗಳಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿರಿಯಾಪಟ್ಟಣದ ಆನೆ ಚೌಕೂರು ಬಳಿ ಅರಣ್ಯ ಪ್ರದೇಶದಲ್ಲಿರುವ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿ ಆನೆ ಕಾವಾಡಿಗಳು ಮತ್ತು ಮಾವುತರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ ವಿಶ್ವ ಆನೆ ದಿನವನ್ನು ಆಚರಿಸಲಾಯಿತು.
ಹುಣಸೂರು ವನ್ಯಜೀವಿ ವಲಯದ ಆರ್‌ಎಫ್‌ಒ ಜಿ.ಮಂಜು ಮಾತನಾಡಿ, ಆನೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಆ.12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ. ಮೊದಲು ಭೂಮಿಯಲ್ಲಿ ಎಲ್ಲೆಡೆ ಆನೆಗಳು ಕಾಣಸಿಗುತ್ತಿದ್ದವು. ಈಗ ಏಷ್ಯಾ ಖಂಡದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಕಂಡುಬರುತ್ತಿದ್ದು, ವನ್ಯಜೀವಿಗಳ ಸಂರಕ್ಷಣೆಯ ಜವಾಬ್ದಾರಿ ಎಲ್ಲ ನಾಗರಿಕರದ್ದಾಗಿದೆ ಎಂದರು.
ಪ್ರಸ್ತುತ ಡೈನೋಸಾರ್‌ಗಳ ಮರಣದ ನಂತರ ಭೂಮಿಯ ಮೇಲಿರುವ ಅತಿ ದೊಡ್ಡ ಪ್ರಾಣಿ ಎಂದರೆ ಆನೆ. ಇವುಗಳು ಪ್ರಕೃತಿಯ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುವ ಜತೆಗೆ ಜೀವಿಗಳ ಆಹಾರ ಸರಪಳಿಯಲ್ಲೂ ಕೂಡ ಆನೆಗಳ ಪಾತ್ರ ಬಹುಮುಖ್ಯವಾಗಿದೆ. ಇಂತಹ ಜೀವಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಿಸುವ ಹೊಣೆ ಪ್ರತಿಯೊಬ್ಬರದ್ದಾಗಿದೆ ಎಂದು ತಿಳಿಸಿದರು.
ರೋಟರಿ ಐಕಾನ್ಸ್ ಸಂಸ್ಥೆ ಅಧ್ಯಕ್ಷ ಟಿ.ಎಸ್.ಹರೀಶ್ ಮಾತನಾಡಿ, ಆನೆಗಳು ಮತ್ತು ಮಾನವನ ಒಡನಾಟ ಇಂದು ನೆನ್ನೆಯದಲ್ಲ. ಇತಿಹಾಸಗಳಲ್ಲೂ ಕೂಡ ಆನೆಗಳ ಪಾತ್ರವನ್ನು ನಾವು ಕಾಣುತ್ತೇವೆ. ಮಹಾಭಾರತದಿಂದ ಹಿಡಿದು ಅನೇಕ ಯುದ್ಧಗಳಲ್ಲಿ ಆನೆಗಳು ಮಹತ್ವದ ಪಾತ್ರ ವಹಿಸಿವೆ. ಇಂದಿಗೂ ದಸರಾದಂತಹ ವಿಶ್ವವಿಖ್ಯಾತ ಆಚರಣೆಯಲ್ಲಿ ಆನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಸಮಾರಂಭದಲ್ಲಿ ಆನೆಗಳಿಗೆ ಆಹಾರವಾಗಿ ಬೆಲ್ಲವನ್ನು ಅರಣ್ಯ ಇಲಾಖೆಗೆ ನೀಡಲಾಯಿತು. ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲ ಸಿ.ಎನ್.ವಿಜಯ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಐಕಾನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೆ.ರಮೇಶ್, ಜೆ.ಎಸ್.ನಾಗರಾಜು, ಕಾರ್ಯದರ್ಶಿ ಕೆ.ಡಿ.ಸಂದೀಪ್, ಸದಸ್ಯರಾದ ಸ್ಮಿತಾ, ಅನಿತಾ, ರಮ್ಯಾ, ಪ್ರೀತಿ ಅರಸ್, ಡಿ.ಆರ್.ದನಂಜಯ್, ಡಿಆರ್‌ಎಫ್‌ಒ ಸುಂದರ್ ರಾಜು, ಮಾವುತರಾದ ಜಯಬಾಲು, ಗಣೇಶ, ಮದು, ಮಂಜು, ಕಾವಾಡಿಗಳಾದ ಮನೋಜ್, ಕುಶಾಲಪ್ಪ ಇತರರು ಇದ್ದರು.