ತಾಲೂಕಿನ ಮಲ್ಲಾಪುರ ಗ್ರಾಮದ ಮೂಲಕ 10ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಕಳೆದ ರಾತ್ರಿ ಸಾಗುತ್ತಿತ್ತು. ಈ ಸಂದರ್ಭ ಮರಿಯೊಂದಿಗೆ ಬಂದ ಕಾಡಾನೆಯೊಂದು ರೈತ ಗಂಗಾಧರ್ ಅವರ ಮನೆಯ ಮುಂಭಾಗದಲ್ಲಿದ್ದ ಮಾವಿನ ಮರದಲ್ಲಿದ್ದ ಹಣ್ಣುಗಳನ್ನು ನೆಲಕ್ಕೆ ಕೆಡವಿ ತಿನ್ನಲು ಮುಂದಾಗಿದೆ. ಆದರೆ ನೆಲಕ್ಕೆ ಬಿದ್ದ ಕೆಲ ಹಣ್ಣುಗಳು ಮರದಡಿ ನಿಲ್ಲಿಸಿದ್ದ ಕಾರಿನ ಕೆಳಗೆ ಬಿದ್ದಿವೆ. ಅವುಗಳನ್ನು ತಿನ್ನಲು ಪ್ರಯತ್ನಿಸಿದ ಕಾಡಾನೆ ಕಾರನ್ನು ಅತ್ತಿಂದಿತ್ತ ಎಳೆದಾಡಿದೆ. ಇದರಿಂದಾಗಿ ಕಾರಿನ ಹಿಂಭಾಗದ ಹಾಗೂ ಕಿಟಕಿಯ ಗಾಜುಗಳು ಪುಡಿಯಾಗಿ, ಕಾರಿನ ಬಾನೆಟ್ ಸೇರಿದಂತೆ ಹಲವು ಭಾಗಗಳು ಹಾನಿಗೊಳಗಾಗಿವೆ. ಘಟನೆ ನಡೆದ ತಕ್ಷಣ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾಡಾನೆಗಳನ್ನು ಕಾಡಿನತ್ತ ಓಡಿಸಿದ್ದರಿಂದ ಗ್ರಾಮಸ್ಥರು ನಿಟ್ಟೂಸಿರು ಬಿಟ್ಟರೂ ಮತ್ತೆ ಯಾವಾಗ ಬರುತ್ತವೆ ಎಂಬ ಆತಂಕದಲ್ಲೇ ಗ್ರಾಮಸ್ಥರಿದ್ದಾರೆ.