ಬದುಕಿರುವಾಗಲೇ ಪತಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪತ್ನಿ!

Wife pays tribute to her husband while he was still alive!
Wife pays tribute to her husband while he was still alive!
Published on
ಗೌರಿಬಿದನೂರು: ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದ ಪತ್ನಿಯು ಮಕ್ಕಳನ್ನು ಕರೆತರಲು ಹೋಗಿದ್ದ ಪತಿ ಹಾಗೂ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಲ್ಲದೇ, ಬದುಕಿರುವ ಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾಳೆ...!
ಸಾಗಾನಹಳ್ಳಿಯ ಅನುಜಾ ಹಾಗೂ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿಯ ಕುಮಾರ್​ ಜತೆ 9ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಮಾರ್​ ಬೆಂಗಳೂರಿನಲ್ಲಿ ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿಯ ಆಸೆಯಂತೆ 5 ವರ್ಷಗಳಿಂದ ದೇವನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ದಂಪತಿ ವಾಸವಾಗಿದ್ದರು. ಪತ್ನಿಯ ಶೋಕಿ ಜೀವನದ ಆಸೆಯಿಂದಾಗಿ ಪತಿ ಕುಮಾರ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಇದೇ ಕಾರಣಕ್ಕೆ ಐದಾರು ತಿಂಗಳಿಂದ ದಂಪತಿ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು ಎನ್ನಲಾಗಿದೆ.
ಬದುಕಿದ್ದ ಗಂಡನಿಗೆ ಶ್ರದ್ಧಾಂಜಲಿ!: ಇದ್ದಕ್ಕಿದ್ದಂತೆ ಅನುಜಾ ಪತಿಗೆ ತಿಳಿಸದೆ ದೇವನಹಳ್ಳಿ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಮಕ್ಕಳ ಜತೆಗೆ ತವರು ಸೇರಿಕೊಂಡಿದ್ದಳು. ವಾಪಸ್​ ಬರುವಂತೆ ಕುಮಾರ್​ ಎಷ್ಟು ಕೇಳಿದರೂ ಪ್ರಯೋಜನವಾಗಿಲ್ಲ. ಬದಲಿಗೆ ತನ್ನ ಪತಿಗೆ ಶ್ರದ್ಧಾಂಜಲಿ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಾಳೆ. ಕುಮಾರ್​ ತನ್ನ ಸಂಬಂಧಿ ಯುವಕರ ಜತೆ ಪತ್ನಿಯ ತವರಿಗೆ ಹೋಗಿ ವಿಚಾರಿಸಿದಾಗ ಕುಮಾರ್​ ಮತ್ತು ಅನುಜಾ ಅಣ್ಣ ಭಾಸ್ಕರ್​ ನಡುವೆ ಜಟಾಪಟಿ ಶುರುವಾಗಿದೆ. ಭಾಸ್ಕರ್​ ಹಾಗೂ ಸಂಬಂಧಿಕರಾದ ಸುರೇಶ್​, ವೆಂಕಟೇಶ್​ ಇತರರು ಸೇರಿ ಕುಮಾರ್​ ಕಾರಿನ ಮೇಲೆ ದಾಂಧಲೆ ಮಾಡಿದ್ದಾರೆ. ಕುಮಾರ್​ ಮತ್ತು ಸಂಬಂಧಿಕರ ಮೇಲೂ ಹಲ್ಲೆ ಮಾಡಿದ್ದಾರೆ. ಇದರಿಂದ ಕುಮಾರ್​ ಸೇರಿ ಇಬ್ಬರು ಗಂಭೀರ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಹೆಂಡತಿ ಕಡೆಯವರು ಪರಾರಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net